ಚಿಕ್ಕಮಗಳೂರು :ಚಿಕಿತ್ಸೆ ನೀಡುವ ಹೈಡ್ರಾಮಾ ಮಾಡಿ ಹಸೆಮಣೆ ಏರಬೇಕಿದ್ದ ಯುವತಿಯನ್ನು ಸ್ಮಶಾನದ ದಾರಿ ಹಿಡಿಯುವಂತೆ ಮಾಡಿರುವ ಖಾಸಗಿ ಆಸ್ಪತ್ರೆಯೊಂದರ ಸಿಬ್ಬಂದಿಯ ನಿರ್ಲಕ್ಷ್ಯ, ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ವಾತಾವರಣ ಸೃಷ್ಟಿಸಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ರಮೇಶ್-ಭಾಗ್ಯ ದಂಪತಿ ಪುತ್ರಿ ನಯನಾ ಏಪ್ರಿಲ್ನಲ್ಲಿ ಸಪ್ತಪದಿ ತುಳಿಯಬೇಕಾಗಿತ್ತು. ಆದ್ರೆ, ಕಳೆದ ಸೋಮವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅಣ್ಣ ನೂತನ್ ಜೊತೆಗೆ ಹಾಸನದ ಮಂಗಳ ಹಾಸ್ಪಿಟಲ್ಗೆ ಹೋಗಿದ್ದಾರೆ. ಅಯ್ಯೋ.. ಒಂದು ಇಂಜೆಕ್ಷನ್ ಹಾಕಿ, ಗ್ಲುಕೋಸ್ ಕೊಟ್ರೆ ಎಲ್ಲವೂ ಸರಿಯಾಗುತ್ತೆ ಅಂದ ಆಸ್ಪತ್ರೆಯವರು ತಮ್ಮಲ್ಲೇ ದಾಖಲಾಗುವಂತೆ ತಿಳಿಸಿದ್ದಾರೆ.
ಹಸೆಮಣೆ ಏರಬೇಕಿದ್ದ ವಧು ಸ್ಮಶಾನದೆಡೆ ಪಯಣ ಇನ್ನೇನು ಬಂದಿದ್ದೀವಿ, ಬೇರೆ ಹಾಸ್ಪಿಟಲ್ ಏನಕ್ಕೆ..? ಇಲ್ಲೇ ಅಡ್ಮಿಟ್ ಮಾಡೋಣ ಅಂತಾ ಮನೆಯವರು ಕೂಡ ನಯನಾಳನ್ನು ಮಂಗಳ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ ಅಷ್ಟೇ. ಸೋಮವಾರ ಆಸ್ಪತ್ರೆಗೆ ದಾಖಲು ಮಾಡಿಕೊಂಡ ಆಸ್ಪತ್ರೆಯವರು ಕೊನೆಗೆ ಕೊಟ್ಟಿದ್ದು ಆಕೆಯ ಡೆಡ್ ಬಾಡಿಯನ್ನು.
ಓದಿ-ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು
ಸೋಮವಾರದಿಂದ ಗುರುವಾರ ಮುಂಜಾನೆ ನಾಲ್ಕು ಗಂಟೆವರೆಗೂ ಆಸ್ಪತ್ರೆಯಲ್ಲಿ ನಡೆದಿದ್ದು ಅಸಲಿಗೆ ಟ್ರೀಟ್ಮೆಂಟ್ ಅಲ್ಲ, ಬದಲಾಗಿ ದೊಡ್ಡ ಹೈಡ್ರಾಮಾ. ಜ್ವರ ಅಂತಾ ಆಸ್ಪತ್ರೆಗೆ ಹೋಗಿದ್ದ ನಯನಾಗೆ ಜಾಂಡೀಸ್ ಇದೆ ಅಂತ ಹೇಳಿದ್ದಾರೆ. ಸಾಮಾನ್ಯ ರೋಗಕ್ಕೆ ಅದೇನೋ ಹೇವಿ ಡೋಸ್ ಕೊಟ್ಟು, ಅನಸ್ತೇಶಿಯಾ ನೀಡಿ ಜ್ಞಾನ ತಪ್ಪುವ ಹಾಗೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬುಧವಾರ ಸಂಜೆಯೇ ಪ್ರಾಣ ಹೋಗಿದ್ರೂ ಮರೆಮಾಚಿ ಆಕ್ಸಿಜನ್ ನೀಡಿ ಬದುಕಿಸಲು ಪ್ರಯತ್ನ ಮಾಡ್ತಿದ್ದೀವಿ ಅನ್ನೋ ಡ್ರಾಮಾ ಮಾಡಿದ್ದಾರೆ. ಕೇವಲ ನರ್ಸ್ಗಳು ಮಾತ್ರ ಕಾಟಾಚಾರಕ್ಕೆ ಟ್ರೀಟ್ಮೆಂಟ್ ನೀಡಿದ್ದು ಬಿಟ್ಟರೆ, ಒಬ್ಬರೇ ಒಬ್ಬ ಡಾಕ್ಟರು ಕೂಡ ಸಾಯೋ ಕ್ಷಣದವರೆಗೂ ನಯನಾಳ ಕಡೆ ಮುಖ ಹಾಕಲಿಲ್ಲ ಎಂದು ಮೃತಳ ಕುಟುಂಬಸ್ಥರು ಹೇಳಿದ್ದಾರೆ.
ನಾವು ಬೇರೆ ಹಾಸ್ಟಿಟಲ್ಗೆ ಜೀರೋ ಟ್ರಾಫಿಕ್ನಲ್ಲಿ ಮಗಳನ್ನು ಕರೆದುಕೊಂಡು ಹೋಗ್ತೀವಿ, ನಿಮಗೆ ದಮ್ಮಯ್ಯ ಕಳಿಸಿಕೊಡಿ ಎಂದು ಪರಿಪರಿಯಾಗಿ ಬೇಡಿದರೂ ಕಳುಹಿಸಿಕೊಡದೇ ನಮ್ಮ ಮಗಳನ್ನು ಕಿತ್ತುಕೊಂಡು ಬಿಟ್ಟರು ಎಂದು ಮೃತ ನಯನಾ ತಾಯಿ ಕಣ್ಣೀರಿಟ್ಟಿದ್ದಾರೆ.
ಒಟ್ಟಾರೆಯಾಗಿ ನಯನಾ ಸಾವು ಪೋಷಕರನ್ನು ದಿಗ್ಭ್ರಾಂತರನ್ನಾಗಿಸಿದೆ. ಮದುವೆ ಸಂಭ್ರಮ ಮಾಯವಾಗಿ ಮನೆಯಲ್ಲಿ ಸೂತಕ ಆವರಿಸಿದೆ. ಒಂದೊಂದು ಕ್ಷಣವೂ ಅಪ್ಪ-ಅಮ್ಮ, ಸೋದರ ಸೇರಿದಂತೆ ಮನೆಯವರನ್ನು ಕಾಡುತ್ತಿದೆ. ಕನಸುಗಳ ಸರಮಾಲೆ ಕಟ್ಟಿಕೊಂಡಿದ್ದ ಮುದ್ದು ಹುಡ್ಗಿ, ಬಾಳ ಪಯಣದಲ್ಲಿ ತನ್ನ ಯಾತ್ರೆಯನ್ನು ಬಲವಂತವಾಗಿ ಮುಗಿಸಿದ್ದಾಳೆ.