ಚಿಕ್ಕಮಗಳೂರು:ದಲಿತ ಯುವಕ ಮೇಲೆ ಹಲ್ಲೆ ನಡೆಸಿದ ಘಟನೆ ಕಾಫಿನಾಡಲ್ಲಿ ತೀವ್ರ ಸ್ವರೂಪ ಪಡೆದಿದೆ. ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರು ತರೀಕೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಗೇರು ಮರಡಿ ಗ್ರಾಮಕ್ಕೆ ಬಂದು ಗೊಲ್ಲರಹಟ್ಟಿಯ ರಂಗನಾಥ ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದರು.
ದಲಿತರು ಏಕೆ ದೇವಸ್ಥಾನ ಪ್ರವೇಶ ಮಾಡಬಾರದು, ನಾವು ಮನುಷ್ಯರೇ ಎಂದು ದಲಿತ ಮುಖಂಡರ ಯೋಜನೆಯಂತೆ ಗ್ರಾಮದ ಗೊಲ್ಲರ ಆರಾಧ್ಯ ದೈವ ರಂಗನಾಥ ಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಿದರು. ಗೊಲ್ಲರಹಟ್ಟಿ ಮುಖಂಡನ ಮನವೊಲಿಸಲು ಪ್ರಯತ್ನ ಮಾಡಿದ್ದು, ದೇವಾಲಯದ ಬಾಗಿಲ ಕೀ ನೀಡದೆ ಇದ್ದಾಗ ತರೀಕೆರೆ ತಾಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲ ಬೀಗ ಒಡೆದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಹಲ್ಲೆಗೊಳಗಾಗಿದ್ದ ಯುವಕ ಮಾರುತಿ ದೇವರಿಗೆ ಪೂಜೆ ಸಲ್ಲಿಸಿ ಅಸ್ಪೃಶ್ಯತೆ ಬಗ್ಗೆ ಆಕ್ರೋಶ ಹೊರಹಾಕಿದರು.
ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಗೇರುಮರಡಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಗ್ರಾಮದ ಮುಖ್ಯದ್ವಾರಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜ್ಯದ ಹಲವು ಭಾಗಗಳಿಂದ ಗ್ರಾಮಕ್ಕೆ ಆಗಮಿಸಿದ್ದ ಸುಮಾರು 200ಕ್ಕೂ ಹೆಚ್ಚು ದಲಿತ ಮುಖಂಡರು ಪೊಲೀಸ್ ಭದ್ರತೆಯಲ್ಲಿ ದೇವಸ್ಥಾನ ಪ್ರವೇಶಿಸಿ ದೇವರಿಗೆ ನಮನ ಸಲ್ಲಿಸಿದರು. ಜೊತೆಗೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಇನ್ನುಳಿದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಪ್ರಕರಣ ಸಂಬಂಧ 15 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸ್ ಇಲಾಖೆ ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ದೇವಾಲಯದ ಒಳ ಪ್ರವೇಶ ಮಾಡಿ ಅಸ್ಪೃಶ್ಯತೆ ದೇಶದಿಂದ ತೊಲಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ದೇವಾಲಯದ ಬಾಗಿಲ ಬೀಗ ಒಡೆದ ಹಿನ್ನೆಲೆ ದೇವಾಲಯವನ್ನು ತಾಲೂಕು ಆಡಳಿತದ ಸಿಬ್ಬಂದಿಗಳು ಸೀಲ್ ಮಾಡಿದ್ದಾರೆ.