ಹುಲಿ ದಾಳಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಚಿಕ್ಕಮಗಳೂರು:ಮಲೆನಾಡಿನಲ್ಲಿ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯನ್ಯಗಿರಿ ತಪ್ಪಲಿನಲ್ಲಿ ಹುಲಿ ಕಾಟ ಆರಂಭವಾಗಿದೆ. ಕಳೆದ ಐದಾರು ವರ್ಷಗಳ ಹಿಂದೆ ಇದೇ ಭಾಗದಲ್ಲಿ ಹುಲಿ ಕಾಣಿಸಿಕೊಂಡು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗಿತ್ತು. ಇದೀಗ ಮತ್ತೆ ಪಂಡರವಳ್ಳಿಯಲ್ಲಿ ಹುಲಿ ದಾಳಿ ಮಾಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿ ಬಳಿ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಹುಲಿ ದಾಳಿ ನಡೆಸಿದೆ. ಮಹಿಳೆಯ ಮುಖ ಹಾಗೂ ಹಣೆಯ ಮೇಲೆ ಗಂಭೀರ ಗಾಯವಾಗಿದೆ.
ಕಾಫಿ ತೋಟದಲ್ಲಿದ್ದ ಇತರೆ ಕಾರ್ಮಿಕರು ಕೂಗಾಡುತ್ತಿದ್ದಂತೆ ಹುಲಿ ಕಾಫಿ ತೋಟದಲ್ಲಿ ಕಣ್ಮರೆಯಾಗಿದೆ. ಹುಲಿ ಹೋಗುತ್ತಿದ್ದಂತೆ ಕಾರ್ಮಿಕರು ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.
ಕಳೆದ ಐದಾರು ವರ್ಷಗಳ ಹಿಂದೆ ಇದೇ ಪಂಡರವಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಸ್ಥಳೀಯ ಕಾರ್ಮಿಕ ಮಹಿಳೆ ಬಲಿಯಾಗಿದ್ದರು. ಹುಲಿಗಾಗಿ ಬೋನಿಟ್ಟು ನಾಲ್ಕೈದು ದಿನಗಳ ಕಾಲ ಕಾದು ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿದ್ದರು. ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿದ ಹುಲಿಯನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಬಿಟ್ಟಿದ್ದರು. ಆದರೆ, ಆ ಹುಲಿ ಖಾನಾಪುರದಲ್ಲೂ ಕೂಡ ಮಹಿಳೆಯನ್ನು ಬಲಿ ಪಡೆದಿತ್ತು. ಬಳಿಕ ನರ ಹಂತಕನಾಗಿದ್ದ ವ್ಯಾಘ್ರನನ್ನ ಕೋರ್ಟ್ ಸೂಚನೆ ಮೇರೆಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೀಗ ಮತ್ತೆ ಪಂಡರವಳ್ಳಿಯಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಾಡಾನೆ ಜೊತೆ ಹುಲಿ ಕಾಟ:ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಳೆದ 6 ತಿಂಗಳಿಂದ ಹುಲಿ ದಾಳಿ ಮುಂದುವರೆದಿದೆ. ಇದೀಗ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ. ಹೀಗಾಗಿ, ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ಜಾನುವಾರುಗಳನ್ನು ಸಾಕಿಕೊಂಡು ಬದುಕು ಸಾಗಿಸುತ್ತಿದ್ದ ರೈತ ಕುಟುಂಬ ಭವಿಷ್ಯದ ಬಗ್ಗೆ ಆಲೋಚಿಸುವಂತಾಗಿದೆ.
ಹುಲಿ ದಾಳಿಗೆ ಹಸು ಬಲಿ:ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ಹುಲಿ ದಾಳಿಗೆ ಹಸುವೊಂದು ಬಲಿಯಾಗಿತ್ತು. ಮತ್ತಿಕಟ್ಟೆಯ ಬ್ಲೂ ಮೌಂಟ್ ಎಸ್ಟೇಟ್ ಆನಂದ್ ಮಿಸ್ಕಿತ್ ಎಂಬುವರ ಕಾಫಿ ತೋಟದಲ್ಲಿ ಮಧುಸೂದನ್ ಎನ್ನುವವರ ಹಸು ಹುಲಿ ಬಾಯಿಗೆ ತುತ್ತಾಗಿತ್ತು. ಬಣಕಲ್ ಸುತ್ತಮುತ್ತಲಿನ ಮತ್ತಿಕಟ್ಟೆ, ಹೆಗ್ಗುಡ್ಲು ಬಿ.ಹೊಸಳ್ಳಿ, ಹೊಕ್ಕಳ್ಳಿ, ಭಾರತೀಬೈಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿವೆ. ಆದರೆ, ಅರಣ್ಯ ಇಲಾಖೆ ಮಾತ್ರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಮುಗಿಯದ ಪ್ರಾಣಿ - ಮಾನವ ಸಂಘರ್ಷ: ಮಲೆನಾಡಿಗರಿಗೆ ಕಾಡಾನೆ ಜೊತೆ ಹುಲಿ ಕಾಟ