ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಪತಿಯ ಮರಣಾನಂತರ ನಾಪತ್ತೆಯಾಗಿದ್ದ ಪತ್ನಿ ಶವವಾಗಿ ಪತ್ತೆ - Etv Bharat Kannada

ಪತಿಯ ಮರಣದ ನಂತರ ನಾಪತ್ತೆಯಾಗಿದ್ದ ಪತ್ನಿಯ ಶವ ಕಾಫಿ ತೋಟದಲ್ಲಿ ಕಾಫಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ.

ಪತಿ ನಂತರ ಕಾಣೆಯಾಗಿದ್ದ ಪತ್ನಿಯ ಶವ ಪತ್ತೆ
ಪತಿ ನಂತರ ಕಾಣೆಯಾಗಿದ್ದ ಪತ್ನಿಯ ಶವ ಪತ್ತೆ

By

Published : Mar 7, 2023, 1:21 PM IST

Updated : Mar 7, 2023, 2:12 PM IST

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಗೋಣಿ ಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಉಗ್ಗೇಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಜಗದೀಶ್ ಆಚಾರ್ ಎಂಬವರ ಪತ್ನಿ ನೇತ್ರಾ ನಾಪತ್ತೆಯಾಗಿದ್ದರು. ಈ ಪ್ರಕರಣವೀಗ ತಿರುವು ಪಡೆದುಕೊಂಡಿದ್ದು ನಾಪತ್ತೆಯಾಗಿದ್ದ ನೇತ್ರಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಜಗದೀಶ್ ಆಚಾರ್ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 3ರಂದು ಕೊನೆಯುಸಿರೆಳೆದಿದ್ದರು. ಗೋಣಿ ಬೀಡು ಠಾಣೆಗೆ ದೂರು ನೀಡಿದ್ದ ಜಗದೀಶ್ ಆಚಾರ್ ತಾಯಿ ಯಶೋಧಮ್ಮ, ನನ್ನ ಮಗನ ಸಾವಿಗೆ ಆತನ ಹೆಂಡತಿ ನೇತ್ರಾ ಮತ್ತು ಆಕೆಯ ಪ್ರಿಯಕರ ಅಂಗಡಿ ಗ್ರಾಮದ ಧನಂಜಯ ಅವರ ನಡುವಿನ ಅಕ್ರಮ ಸಂಬಂಧವೇ ಕಾರಣ. ಹೆಂಡತಿಯ ಅಕ್ರಮ ಸಂಬಂಧದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿದ್ದರು. ಅಲ್ಲದೇ ನೇತ್ರಾ ಮತ್ತು ಧನಂಜಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.

ತನ್ನ ವಿರುದ್ಧ ಗಂಡನ ಕುಟುಂಬದವರು ದೂರು ನೀಡುವ ಸುಳಿವರಿತ ನೇತ್ರಾ ಮಾರ್ಚ್ 3ರ ರಾತ್ರಿ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕಳೆದ ಎರಡು ದಿನಗಳಿಂದ ಆಕೆಯ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಶವ ಮನೆಯಿಂದ ಸ್ವಲ್ಪ ದೂರದಲ್ಲಿರುವ ಗ್ರಾಮದ ಚಂದನ್ ಎಂಬುವವರ ಕಾಫಿ ತೋಟದಲ್ಲಿ ಕಾಫಿ ಗಿಡವೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ದೊರೆತಿದೆ. ಶವದ ಕಾಲು ನೆಲಕ್ಕೆ ತಾಗಿದ ಸ್ಥಿತಿಯಲ್ಲಿದ್ದು, ಇದು ಆತ್ಮಹತ್ಯೆಯೋ ಆಥವಾ ಕೊಲೆಯೋ ಎಂಬ ಸಂಶಯ ಹುಟ್ಟಿಕೊಂಡಿದೆ. ವಿಷಯ ತಿಳಿದ ಗೋಣಿಬೀಡು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ತನಿಖೆ ಕೈಗೊಂಡಿದ್ದಾರೆ.

ಉಗ್ಗೇಹಳ್ಳಿ ಗ್ರಾಮದ ಕೃಷಿಕ ಜಗದೀಶ್ ಆಚಾರ್ ಮತ್ತು ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ನೇತ್ರಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.

ಇದನ್ನೂ ಓದಿ:ಪತ್ನಿ ಕೊಂದು ಶವ ಸಾಗಿಸುತ್ತಿದ್ದಾಗ ಬೆನ್ನಟ್ಟಿದ ಜನರು; ಶವದ ಸಮೇತ ಪೊಲೀಸ್ ಠಾಣೆಗೆ ಬಂದ ಆರೋಪಿ

Last Updated : Mar 7, 2023, 2:12 PM IST

ABOUT THE AUTHOR

...view details