ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕೃಷ್ಣೇಗೌಡ ಎಂಬುವರ ತೋಟಕ್ಕೆ ದಾಳಿ ಮಾಡಿದ ಆನೆಗಳು ಚಿಕ್ಕಮಗಳೂರು ತಾಲೂಕಿನ ಆವತಿ ಬಳಿಯ ಕಾಫಿ ಬೆಳೆಗಾರ ಕೃಷ್ಣೇಗೌಡ ಎಂಬುವರ ತೋಟಕ್ಕೆ ಕಳೆದ ಒಂದು ವಾರದಿಂದ ಕಾಡಾನೆಗಳು ದಾಳಿ ಮಾಡುತ್ತಿದ್ದು, ಕಾಫಿ, ಅಡಿಕೆ ಸೇರಿದಂತೆ ತೆಂಗಿನ ಮರಗಳನ್ನು ನೆಲಕ್ಕೆ ಉರುಳಿಸಿವೆ.
ಈಗಾಗಲೇ ಕಾಫಿ ಕಟಾವಿಗೆ ಬಂದಿದೆ. ಆದರೆ ನಿರಂತರವಾಗಿ ತೋಟಕ್ಕೆ ಆನೆಗಳು ನುಗ್ಗುತ್ತಿರುವುದರಿಂದ ಕಾರ್ಮಿಕರು ತೋಟದ ಒಳಗೆ ಹೋಗುವುದಕ್ಕೆ ಭಯ ಪಡುವಂತಾಗಿದೆ ಎಂದು ರೈತ ಕೃಷ್ಣೇಗೌಡ ತಿಳಿಸಿದ್ದಾರೆ.
ಒಂದೆಡೆ ಕಾಡಾನೆ ದಾಳಿಯಿಂದ ಬೆಳೆ ಹಾನಿಯಾಗುತ್ತಿದೆ. ಜೊತೆಗೆ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.