ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಅರವಳಿಕೆ ನೀಡಿದ ಬಳಿಕ ಸುಮಾರು 8 ಕಿ.ಮೀನಷ್ಟು ದೂರ ಸಾಗಿದ ಒಂಟಿ ಸಲಗ ಸಾರಗೋಡು ಸಮೀಪ ಅರಣ್ಯದಲ್ಲಿ ಪ್ರಜ್ಞೆತಪ್ಪಿ ಬಿದ್ದಿತ್ತು. ಅಭಿಮನ್ಯು ನೇತೃತ್ವದ ಸಾಕಾನೆಗಳ ನೆರವಿನಿಂದ ಸೆರೆಯಾದ ಇದನ್ನು ಲಾರಿಗೆ ಹತ್ತಿಸಿ ಸಕ್ರೇಬೈಲ್ ಆನೆ ಶಿಬಿರದ ಕಡೆ ಕೊಂಡೊಯ್ಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ನವೆಂಬರ್ 8ರಂದು ಕಾರ್ಮಿಕ ಮಹಿಳೆಯೋರ್ವರನ್ನು ಆನೆ ತುಳಿದು ಕೊಂದಿತ್ತು. ಮಹಿಳೆಯನ್ನು ಕೊಂದ ದಿನವೇ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಅವರ ಸೂಚನೆಯ ಮೇರೆಗೆ ಆನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲದೇ ಮಹಿಳೆಯನ್ನು ಕೊಂದ ಆನೆ ಮಲೆನಾಡು ಭಾಗದಲ್ಲೂ ಹಲವಾರು ಜನರ ಮೇಲೆ ದಾಳಿ ನಡೆಸಿತ್ತು.
ಆನೆ ಸೆರೆ ಜತೆಗೆ ಆಲ್ದೂರು ಸುತ್ತಮುತ್ತ ಸಂಚರಿಸುತ್ತಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟಲು ಒಟ್ಟು 9ಸಾಕಾನೆಗಳನ್ನು ಕರೆತರಲಾಗಿತ್ತು. ಒಂಟಿ ಸಲಗದ ಪತ್ತೆಗೆ 5 ದಿನಗಳ ಕಾಲ ಸತತ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಆನೆ ಮಾತ್ರ ಪತ್ತೆಯಾಗಿರಲಿಲ್ಲ. ಪ್ರಾಣ ಹಾನಿ ಉಂಟು ಮಾಡುತ್ತಿದ್ದ ಒಂಟಿ ಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವಾಗ ಕುಂದೂರು ಭಾಗದ ಕಾಡಿನಲ್ಲಿ ಅನೇಕ ಆನೆಗಳು ಪತ್ತೆಯಾಗಿದ್ದವು. ಅದರಲ್ಲಿ ಕಾಡಾನೆಯೊಂದನ್ನು ಈಗ ಸೆರೆಹಿಡಿಯಲಾಗಿದೆ. ಸೆರೆಯಾಗಿರುವ ಆನೆಯೂ ಸಹ ಕುಂದೂರು ಸಾರಗೋಡು ಭಾಗದಲ್ಲಿ ರೈತರಿಗೆ ಉಪಟಳ ನೀಡುತ್ತಿತ್ತು.