ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇತ್ತೀಚೆಗೆ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದರ ಬೆನ್ನಲೇ ಕಾಡುಕೋಣ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಸಾವಿಗೀಡಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೋಟದೂರು ಸಮೀಪ ಇಂದು ಬೆಳಗ್ಗೆ 10:30 ರ ಸಮಯದಲ್ಲಿ ಘಟನೆ ಸಂಭವಿಸಿದೆ. ಕಳಿಹಿತ್ಲು ಬಳಿಯ ತೋಟಕ್ಕೆಂದು ಬಂದಿದ್ದಾಗ ಸೋಮಶೇಖರ (45) ಎಂಬವರು ಕಾಡು ಕೋಣ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಕಾಡು ಕೋಣ ಕೊಂಬಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ್ದು, ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮಶೇಖರ್ ಜಯಪುರ ನಿವಾಸಿ.