ಚಿಕ್ಕಮಗಳೂರು:ಜಿಲ್ಲೆ ಒಂದು ಪ್ರವಾಸಿ ತಾಣವಾಗಿದ್ದರಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ. ಈ ಹಿನ್ನೆಲೆ ಜಿಲ್ಲೆಯಲ್ಲಿರುವ ಎಲ್ಲ ಹೋಂ ಸ್ಟೇಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಒಂದು ವೇಳೆ ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯ ಇರುವ ಬಗ್ಗೆ ಕೇಸ್ ಬಂದರೆ ಅದರ ಮಾಲೀಕರೇ ಹೊಣೆಯಾಗುತ್ತಾರೆ ಎಂದು ಪೊಲೀಸ್ ಮಹಾನಿರ್ದೇಶಕರ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಪೊಲೀಸರು ಕೂಡ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಪ್ರವಾಸಿ ತಾಣಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದು ಹೋಂ ಸ್ಟೇನಲ್ಲಿ ಮಾದಕ ದ್ರವ್ಯದ ಬಗ್ಗೆ ಕೇಸ್ ಬಂದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.