ಚಿಕ್ಕಮಗಳೂರು :ಜಿಲ್ಲೆಯ ತರೀಕೆರೆ ತಾಲೂಕಿನ ಶಿವನಿ ಹೋಬಳಿಯ ಚೀರನಹಳ್ಳಿ ಶಾಲೆ ಶಿಕ್ಷಕರ ಬೇಜವಾಬ್ದಾರಿ ಹಾಗೂ ತಡವಾಗಿ ಶಾಲೆಗೆ ಬರುವುದನ್ನು ಪ್ರಶ್ನಿಸಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಚೆಗೆ ಕೆಲ ಶಿಕ್ಷಕರನ್ನು ಶಾಲಾ ಗೇಟ್ ಎದುರು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಸಬೂಬು ನೀಡುತ್ತಿದ್ದ ಶಿಕ್ಷಕರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ 5 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 30 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆ ವೇಳೆ ಶಿಕ್ಷಕರಿಂದ ವೈಯಕ್ತಿಕ ಕೆಲಸ.. ಶಿಕ್ಷಕರು ವೈಯಕ್ತಿಕ ಕೆಲಸಗಳನ್ನು ಶಾಲಾ ಸಮಯದಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಶಿಕ್ಷಕರ ಬೇಜವಾಬ್ದಾರಿ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ವಿಚಾರವಾಗಿ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟನೆ ಮಾಡಿದ್ದಾರೆ ಎಂದು ಪೋಷಕರು ಹೇಳಿದರು. ಕೂಡಲೇ ಇಂತಹ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡಿ, ಇಲ್ಲವೇ ಅಮಾನತುಗೊಳಿಸಿ ಅಂತಾ ಗ್ರಾಮಸ್ಥರು ಆಗ್ರಹಿಸಿದರು.