ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಬ್ಯಾನರ್ ತೆರವಿಗೆ ಬಂದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಬ್ಯಾನರ್‌ಗಳನ್ನೇಕೆ ತೆರವು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಜೊತೆಗೆ ಹಿಗ್ಗಾಮುಗ್ಗಾ ತರಾಟೆಗೂ ತೆಗೆದುಕೊಂಡಿದ್ದಾರೆ. ನೀವು ಸಂಬಳಕ್ಕೆ ಹೋರಾಡ್ತಿರಾ, ನಾವು ಬದುಕಿಗಾಗಿ ಹೋರಾಡ್ತೀವಿ ಎಂದು ಬ್ಯಾನರ್ ತೆರವಿಗೆ ಬಂದಿದ್ದ ಆರ್.ಐ. ಹಾಗೂ ಪಿ.ಡಿ.ಓ ಮೇಲೆ ಜನರು ಕೆಂಡಾಮಂಡಲರಾದರು. ಇದೇ ವೇಳೆ ಹುಲಿ ಯೋಜನೆ, ಬಫರ್ ಝೋನ್, ಕಸ್ತೂರಿ ರಂಗನ್ ವರದಿ ವಿರುದ್ಧವೂ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.