ಚಿಕ್ಕಮಗಳೂರು: ವಾರ್ಡ್ ಸಭೆಗೆ ಬಂದ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೌಡನಹಳ್ಳಿ ಗ್ರಾ.ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ - ಗೌಡನ ಹಳ್ಳಿ ಗ್ರಾಮದ ಸಭೆಯಲ್ಲಿ ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ
ಗ್ರಾಮದ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಗೌಡನಹಳ್ಳಿ ಗ್ರಾಮದ ಸಭೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗೌಡನ ಹಳ್ಳಿಯಲ್ಲಿ ಅಧಿಕಾರಿಗಳಿಂದ ವಾರ್ಡ್ ಸಭೆ ಆಯೋಜಿಸಲಾಗಿತ್ತು. ಆದರೆ ಗೌಡನಹಳ್ಳಿ ಪಿಡಿಓ ಗ್ರಾಮದ ಯಾವುದೇ ಕೆಲಸಕ್ಕೆ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದು, ಅವರ ಬಳಿ ಏನೇ ಕೇಳಲು ಹೋದರೂ ಗ್ರಾಮಸ್ಥರಿಗೆ ಸರಿಯಾದ ಉತ್ತರ ನಿಡುವುದಿಲ್ಲ. ಸಾಮಾನ್ಯ ವ್ಯಕ್ತಿ ಅವರ ಹತ್ತಿರ ಮಾತನಾಡುವುದು ಕಷ್ಟಕರವಾಗಿದೆ. ಚಿಕ್ಕಮಗಳೂರು ನಗರದ ಕೆಲವೇ ಕಿ.ಮೀ ದೂರದಲ್ಲಿರುವ ಕೈಗಾರಿಕಾ ಪ್ರದೇಶದ ಹತ್ತಿರ ತುಂಬಾ ಕುಟುಂಬಗಳು ವಾಸವಿದ್ದು, 15 ದಿನಕ್ಕೊಮ್ಮ ನೀರು ಬಿಡುತ್ತಿದ್ದಾರೆ ಎಂದು ದೂರಿದರು.
ನಾವು ಮಲೆನಾಡಿನ ಭಾಗದಲ್ಲಿದ್ದರೂ ನೀರಿಗಾಗಿ ಪರದಾಟ ನಡೆಸಬೇಕಿದೆ. ಸರಿಯಾಗಿ ಕಸ ವಿಲೇವಾರಿ ಮಾಡದೆ ಗಬ್ಬು ನಾರುತ್ತಿದೆ. ಇದನ್ನು ಕೇಳಲು ಹೋದರೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಮಾತನಾಡಿ ಅಂತ ಹೇಳುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.