ಚಿಕ್ಕಮಗಳೂರು :ವಿಧಾನಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ಸೋಮವಾರ ರಾತ್ರಿ ನಡೆದಿದೆ.
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾದ ಎಸ್ ಎಲ್ ಧರ್ಮೇಗೌಡ ಅವರು, 1955 ಡಿಸೆಂಬರ್ 16 ರಂದು ಸರಪನಹಳ್ಳಿಯಲ್ಲಿ ಜನಿಸಿದರು. ಚಿಕ್ಕಮಗಳೂರು ತಾಲೂಕು ಬಿಳೇಕಲ್ಲಹಳ್ಳಿ ಮಂಡಲ ಪಂಚಾಯತ್ ಸದಸ್ಯರಾಗಿ, ಮಂಡಲ ಪಂಚಾಯತ್ ಪ್ರಧಾನರಾಗುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. ಇವರು ಮಮತಾ ಎಂಬುವರ ಜತೆ ವಿವಾಹವಾಗಿದ್ದರು. ಧರ್ಮೇಗೌಡ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮಂಡಲ ಪಂಚಾಯತ್ ಸದಸ್ಯರಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಇವರು, ನಂತರ ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ, ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ, ಹಾಸನ ಹಾಲು ಒಕ್ಕೂಟದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜನತಾ ಬಜಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಎಸ್ ಎಲ್ ಧರ್ಮೇಗೌ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ವಿಮಾ ಸಹಕಾರ ಸಂಘದ ನಿರ್ದೇಶಕ, ರಾಜ್ಯ ಕೈಗಾರಿಕಾ ಬ್ಯಾಂಕ್ ನಿರ್ದೇಶಕ, ನವದೆಹಲಿಯ ಕ್ರಿಬ್ಕೊ ಸಂಸ್ಥೆ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೊಟಾಷ್ ಲಿಮಿಟೆಡ್ ನಿರ್ದೇಶಕ, ಎನ್‍ಸಿಡಿಸಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.