ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಭಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಧಗೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಮಲೆನಾಡು ಜಿಲ್ಲೆ. ಸಾಮಾನ್ಯವಾಗಿ ತಣ್ಣನೆಯ ವಾತಾವರಣವನ್ನು ಹೊಂದಿದ್ದು, ತಂಪಾದ ಗಾಳಿಯ ಮಧ್ಯೆ ಜನರು ಜೀವನ ಮಾಡುತ್ತಿದ್ದರು. ಆದರೆ ಈ ಭಾರಿ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಇತರ ಜಿಲ್ಲೆಗಳನ್ನು ಮೀರಿಸುವಂತಹ ಬಿಸಿಲಿದ್ದು, ಜನರು ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಚಿಕ್ಕಮಗಳೂರಲ್ಲಿ ಹೆಚ್ಚಿದ ತಾಪಮಾನ,ಹೈರಾಣಾದ ಜನ ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ, ಕಾಫಿ ತೋಟಗಳ ನಾಶದಿಂದ ಮಳೆ ಸರಿಯಾಗಿ ಆಗದ ಪರಿಣಾಮ ಹವಾಮಾನದಲ್ಲಿ ವೈಪರೀತ್ಯ ಕಂಡು ಬರುತ್ತಿದ್ದು, ಜನರು ಮನೆಯ ಹೊರಗೂ ಇರಲಾರದೆ ಮನೆಯ ಒಳಗೂ ಇರಲಾರದೆ ಬಿಸಿಲಿನಿಂದ ಬೆಂದು ಹೋಗುತ್ತಿದ್ದು, ಎಳನೀರು, ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಹವಾಮಾನ ವೈಪರೀತ್ಯ ಪ್ರಕೃತಿಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ನದಿಗಳು, ಹಳ್ಳ ಕೊಳ್ಳಗಳಲ್ಲಿ ನೀರು ಮಾಯವಾಗಿ ಹೋಗಿದೆ. ದನ ಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಮೇವು ಕೂಡ ಸಿಗುತ್ತಿಲ್ಲ. ಮಲೆನಾಡು ಎಂದೇ ಖ್ಯಾತಿ ಗಳಿಸಿರುವ ಜಿಲ್ಲೆ, ಈಗ ಬಯಲು ಸೀಮೆಯಾಗಿದ್ಯೇನೋ ಎಂಬಂತೆ ಭಾಸವಾಗುತ್ತಿದೆ.