ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಶುಕ್ರವಾರದಿಂದ ಈ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಫೆಬ್ರವರಿ 21ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಶೃಂಗೇರಿ ಸಂಸ್ಥಾನದ ವತಿಯಿಂದ ಶ್ರೀ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು, ಮಹಾ ಕುಂಭಾಭಿಷೇಕ ಸೇರಿದಂತೆ ಲಕ್ಷ ಮೋದಕ ಮಹಾಗಣಪತಿ ಹೋಮ, ಅತಿರುದ್ರಾಮಹಾಯಾಗ ಸಂಗಲ್ಪ ಸೇರದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿದೆ.
ಜಗದ್ಗುರು ಶ್ರೀ ಭಾರತೀ ತೀರ್ಥಮಹಾಸ್ವಾಮಿಗಳು ಶ್ರೀ ಭವಾನೀಮಲಹಾನಿಕರೇಶ್ವರ ದೇವರಿಗೆ ರಾಜ ಗೋಪುರವನ್ನು ನಿರ್ಮಾಣ ಮಾಡಿಸಿದ್ದು, ಶುಭಕೃತ್ ಸಂವತ್ಸರದಲ್ಲಿ ಮಾಗ ಕೃಷ್ಣಸಪ್ತಮಿ ದಿನ ಶ್ರೀ ವಿಧು ಶೇಖರಭಾರತಿ ತೀರ್ಥ ಮಹಾಸ್ವಾಮಿಗಳು ಕುಂಭಾಭಿಷೇಕ ನೆರವೇರಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಲೋಕ ಕ್ಷೇಮರ್ಥವಾಗಿ, ಅತಿರುದ್ರ ಮಹಾಯಾಗ, ಚತುರ್ವೇದ ಅಷ್ಟದಶ ಪುರಾಣದಿ ಪಾರಾಯಣಗಳು, ಪಂಚಾಕ್ಷರಿ ಶ್ರೀವಿದ್ಯಾದಿ ಮಹಾಮಂತ್ರಗಳ ಜಪ ಮತ್ತು ಹೋಮ ಸೇರಿದಂತೆ ಮೊದಲಾದ ಕಾರ್ಯಕ್ರಮಗಳು ಜರಗಲಿವೆ. ಭಾನುವಾರ (ಪೆಬ್ರವರಿ 12) ಜಗದ್ಗುರು ಮಹಾಸ್ವಾಮಿಗಳಿಂದ ಶ್ರೀ ಸ್ತಂಭ ಗಣಪತಿಗೆ ಕುಂಭಾಭಿಷೇಕ ನಡೆಯಲಿದೆ. ಬೆಳಗ್ಗೆ 7.30 ರಿಂದ ಶ್ರೀ ಶ್ರೀ ಭವಾನೀಮಲಹಾನಿಕರೇಶ್ವರ ಸನ್ನಿಧಿಯಲ್ಲಿ ಸಹಸ್ರ ಕಲಾಶಭಿಷೇಕ ಆರಂಭಗೊಳ್ಳಲಿದೆ.
ಬಳಿಕ ಶ್ರೀ ಭವಾನಿ ಅಮ್ಮನವರಿಗೆ ಜಗದ್ಗುರು ಮಹಾಸ್ವಾಮಿಗಳಿಂದ ಮಹಾ ಕುಂಭಾಭಿಷೇಕ, ಮಹಾಪೂಜೆ ಮತ್ತು ಮಹಾನೀರಾಜನ ನಡೆಯಲಿದೆ. ಇದಾದ ಬಳಿಕ 9:45ಕ್ಕೆ ವಿಮಾನ ಗೋಪುರ ಮತ್ತು ರಾಜ ಗೋಪುರಗಳ ಕುಂಭಾಭಿಷೇಕ ನಡೆಯಲಿದ್ದು, ಸಂಜೆ ವೇಳೆಗೆ ಮಹಾಸಭಾ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಜಗದ್ಗುರುಗಳ ಅನುಗ್ರಹ ಭಾಷಣ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.