ಚಿಕ್ಕಮಗಳೂರು: ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾದಲ್ಲಿ ಮೂರು ದಿನಗಳ ಉರುಸ್ ಆಚರಣೆ ಇಂದಿನಿಂದ ಆರಂಭವಾಗುತ್ತಿದ್ದು, 3 ದಿನಗಳ ಕಾಲ ನಡೆಯುವ ಉರುಸ್ ಆಚರಣೆ ಕುರಿತು ಮುಸ್ಲಿಂ ಸಮುದಾಯದ ಜನರು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ದತ್ತಪೀಠದ ಆಡಳಿತಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ದತ್ತಪೀಠ ವ್ಯವಸ್ಥಾಪನ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿರುವ ಮುಸ್ಲಿಂ ಸಮುದಾಯ ಉರುಸ್‌ನಿಂದ ದೂರ ಉಳಿಯುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ರಚಿಸಿರುವ ವ್ಯವಸ್ಥಾಪನ ಮಂಡಳಿ ಹಾಗೂ ಜಿಲ್ಲಾಡಳಿದ ಮುಂದಾಳತ್ವದಲ್ಲಿ ಉರುಸ್ ಆಚರಣೆ ನಡೆಯುತ್ತಿದ್ದು, ಇದನ್ನು ತಿರಸ್ಕರಿಸಿರುವ ಮುಸ್ಲಿಂ ಸಮುದಾಯ, ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದೆ. ರಾಜ್ಯ ಸರ್ಕಾರದ ಮುಂದೆ ನಾಲ್ಕು ಬೇಡಿಕೆಗಳನ್ನು ಇಟ್ಟಿರುವ ಮುಸ್ಲಿಂ ಸಮುದಾಯ, ಸರ್ಕಾರ ಅವುಗಳನ್ನು ಈಡೇರಿಸದ ಹಿನ್ನೆಲೆ ಈ ಬಾರಿ ನಡೆಯುವ ಉರುಸ್ ಆಚರಣೆಯಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗಿದೆ.
ದತ್ತ ಪೀಠದಲ್ಲಿ ಪೂಜೆ ನೆರವೇರಿಸಲು ನೇಮಕವಾಗಿರುವ ಅರ್ಚಕರ ನೇಮಕಾತಿ ರದ್ದು ಮಾಡಬೇಕು ಹಾಗೂ ಈಗಾಗಲೇ ರಚಿಸಿರುವ ವ್ಯವಸ್ಥಾಪನಾ ಮಂಡಳಿಯನ್ನು ರದ್ದು ಮಾಡಬೇಕು. 8 ಜನರ ವ್ಯವಸ್ಥಾಪನಾ ಮಂಡಳಿಯಲ್ಲಿ 4 ಜನ ಹಿಂದೂ ಹಾಗೂ 4 ಜನ ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ. ಗುಹೆಯೊಳಗಿರುವ ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆಗೆ ಅವಕಾಶ ನೀಡಬೇಕು. ದತ್ತ ಪೀಠದಲ್ಲಿರುವ ಮಸೀದಿ ತೆರೆದು ನಮಾಜ್ ಮಾಡಲು ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದವರು ಆಗ್ರಹಿಸಿದ್ದರು.