ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದಿನ ಎಸ್‌ಪಿ ಅಕ್ಷಯ್ ಎಂ.ಕೆ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿತ್ತು. ವರ್ಗಾವಣೆಗೊಂಡ ಅಕ್ಷಯ್ ಅವರಿಗೆ ಸರ್ಕಾರ ಇನ್ನೂ ಸ್ಥಳ ತೋರಿಸಿಲ್ಲ.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದ ಇಲ್ಲಿಯವರೆಗೂ ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಕೋವಿಡ್ ಸಂದರ್ಭ, ದತ್ತಪೀಠ ವಿಚಾರದಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಸಂದರ್ಭಗಳಲ್ಲಿ ಎಲ್ಲರ ಸಹಕಾರ ಸಿಕ್ಕಿದೆ. ಈ ರೀತಿಯ ಸಹಕಾರವೇ ನೂತನ ವರಿಷ್ಠಾಧಿಕಾರಿಗಳಿಗೂ ಸಿಗಲಿ ಎಂದು ಬಯಸುತ್ತೇನೆ ಎಂದು ಹೇಳಿದರು.
ಸಕಲ ಗೌರವಾಧಾರಗಳೊಂದಿಗೆ ಎಸ್‌ಪಿ ಉಮಾ ಪ್ರಶಾಂತ್ ಅವರನ್ನು ಸ್ವಾಗತಿಸಿದ ಜಿಲ್ಲಾ ಪೊಲೀಸ್ ಸಿಬ್ಬಂದಿ ಅಧಿಕಾರವಹಿಸಿಕೊಂಡ ಉಮಾ ಪ್ರಶಾಂತ್ ಮಾತನಾಡಿ, ಬೆಂಗಳೂರು, ಮಂಗಳೂರು ಇನ್ನಿತರೆ ಕಡೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಮಲೆನಾಡು ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ಬಂದಿರುವುದು ಸಂತೋಷ ತಂದಿದೆ. ಕಾಫಿನಾಡಿನ ಜನ ಶಾಂತಿಪ್ರಿಯರು ಎಂದು ಭಾವಿಸಿದ್ದೇನೆ. ಪ್ರವಾಸೋದ್ಯಮ ಕೇಂದ್ರವಾದ ಜಿಲ್ಲೆಗೆ ಹೊರಗಿನಿಂದ ಸಾಕಷ್ಟು ಜನ ಇಲ್ಲಿಗೆ ಬರುತ್ತಾರೆಂದು ತಿಳಿದಿದ್ದೇನೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿತು ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮ ಇಲಾಖೆ ಸಿದ್ಧವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಹಾಗೂ ಮಾಧ್ಯಮದವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಮಳೆಯಿಂದ ಬೀದಿಗೆ ಬಿದ್ದ ಜನ.. ಶೀಘ್ರದಲ್ಲೇ ಮನೆ ಕಟ್ಟಿಸಿಕೊಡುವುದಾಗಿ ಸಚಿವ ಅಶ್ವತ್ಥ್ ನಾರಾಯಣ್ ಅಭಯ