ಚಿಕ್ಕಮಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಚಿಕ್ಕಮಗಳೂರು ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ಗಾಂಜಾ ಮಾರಾಟ : ಇಬ್ಬರು ಖದೀಮರ ಬಂಧನ
ಸ್ಥಳೀಯರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅರುಣ್ ನಾಯ್ಕ್ ಹಾಗೂ ರಾಜೇಶ್ ನಾಯ್ಕ್ ಬಂಧಿತ ಆರೋಪಿಗಳು. ಇವರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಕದಲಿರಂಗನಾಥ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಭದ್ರಾ ಚಾನೆಲ್ ಬಳಿ ಬೈಕ್ ನಲ್ಲಿ ಸ್ಥಳೀಯರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ ಸುಮಾರು 3 ಸಾವಿರ ರೂ. ಮೌಲ್ಯದ 132 ಗ್ರಾಂ ಗಾಂಜಾ ಸೊಪ್ಪು ಹಾಗೂ ಒಂದು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಈ ಕುರಿತು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.