ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮಳೆ ಜೊತೆ ದಟ್ಟ ಮಂಜು ಕವಿದಿದ್ದು, ವಾಹನ ಸವಾರರು ಪಾರ್ಕಿಂಗ್ ಲೈಟ್, ಹೆಡ್‍ಲೈಟ್, ಫಾಗ್ ಲೈಟ್ ಹಾಕಿಕೊಂಡು ಹೋದರೂ ವಾಹನ ಸಂಚಾರ ದುಸ್ತರವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. 22 ಕಿ.ಮೀ. ವ್ಯಾಪ್ತಿಯ ಕೊಟ್ಟಿಗೆಹಾರ- ಚಾರ್ಮಾಡಿ ಮಾರ್ಗದಲ್ಲಿ ಭಾರಿ ಮಂಜು ಕವಿದಿದ್ದು, ಆ ಮಂಜಿನಲ್ಲಿ ವಾಹನ ಸಂಚರಿಸಲಾಗದೆ ಎರಡು ಅಪಘಾತಗಳು ಕೂಡ ಸಂಭವಿಸಿವೆ.
ಬಿದಿರುತಳ ಗ್ರಾಮದ ಬಸ್ ನಿಲ್ದಾಣದ ಬಳಿ ಮಂಗಳೂರಿಗೆ ಹೋಗುತ್ತಿದ್ದ, ಬೊಲೆರೋ ವಾಹನವೊಂದು ದಟ್ಟ ಮಂಜಿನಲ್ಲಿ ಸರಿಯಾಗಿ ದಾರಿ ಕಾಣದೇ ರಸ್ತೆಯ ಒಂದು ಬದಿಯ ಪ್ರಪಾತಕ್ಕೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಗೆ ಡಿಕ್ಕಿಯೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದು ಅಪಘಾತ: ಅಣ್ಣಪ್ಪಸ್ವಾಮಿ ದೇಗುಲದ ಸಮೀಪದ ಕಿರಿದಾದ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ದಾರಿ ಕಾಣದೇ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಸರ್ಕಾರಿ ಬಸ್ ಹಾಗೂ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮುಗಿಸಿ ಧಾರವಾಡಕ್ಕೆ ಹೊರಟಿದ್ದ ಕಾರು ತಿರುವಿನ ಕಿರು ರಸ್ತೆಯಲ್ಲಿ ಡಿಕ್ಕಿಯಾಗಿ, ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತಡೆ ಗೋಡೆಯೇ ಕುಸಿದು ಬಿದ್ದಿದೆ. ಕಾರು ಹಾಗೂ ಬಸ್ನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಸಣ್ಣ ಕಿರು ರಸ್ತೆಯಲ್ಲಿ ಸಾವಿರಾರು ಅಡಿ ಪ್ರಪಾತವಿದ್ದು, ಸ್ವಲ್ಪ ಹೆಚ್ಚು- ಕಡಿಮೆಯಾಗಿದ್ದರೂ ಬಸ್ ಹಾಗೂ ಕಾರು ಎರಡು ಪ್ರಪಾತಕ್ಕೆ ಬೀಳುತ್ತಿತ್ತು. ಆದರೆ, ಬಹುದೊಡ್ಡ ಅನಾಹುತವೊಂದು ಜಸ್ಟ್ ಮಿಸ್ ಆದಂತಾಗಿದೆ.
ಚಾರ್ಮಾಡಿ ಘಾಟಿಯ ಈ ಕಿರು ರಸ್ತೆ ಅಂದಿನಿಂದಲೂ ಇದೇ ರೀತಿ ಇದೆ. ಹೆದ್ದಾರಿ ಪ್ರಾಧಿಕಾರ ಈ ಚಿಕ್ಕ ರಸ್ತೆಯನ್ನು ಅಗಲ ಮಾಡಬೇಕು ಎಂದು ಸ್ಥಳೀಯರು ಮನವಿ ಕೂಡ ಮಾಡಿದ್ದರು. ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದ ಕಾರಣ ಇಂದು ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನೂ ಈಗ ಘಾಟಿಯಲ್ಲಿ ಭಾರೀ ಮಂಜು ಕವಿದಿದೆ. ತಡೆಗೋಡೆ ಬೇರೆ ಕುಸಿದಿದೆ. ರಸ್ತೆಯೂ ಕಿರಿದಾದ ರಸ್ತೆ. ಮತ್ತೊಂದು ಅನಾಹುತ ಸಂಭವಿಸುವ ಮೊದಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ರಸ್ತೆಗೊಂದು ಬಂದೋಬಸ್ತ್ ಕಲ್ಪಿಸಿ ಶೀಘ್ರದಲ್ಲೇ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ತಂದೆ - ಮಗಳು ಸಾವು