ಚಿಕ್ಕಮಗಳೂರು : 2023ಕ್ಕೆ ಗುಡ್ ಬೈ ಹೇಳುವ ಕಾಲ ಸನ್ನಿಹಿತವಾಗುತ್ತಿದೆ. ವರ್ಷಾಂತ್ಯವನ್ನು ಕಲರ್ಫುಲ್ ಆಗಿ ಸೆಲೆಬ್ರೇಟ್ ಮಾಡಬೇಕು, 2024ನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು ಅಂತ ಎಲ್ಲರೂ ಕಾತರದಿಂದಿದ್ದಾರೆ. ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಕಾಫಿನಾಡಿನಲ್ಲಿ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್‍ಗಳು ಈಗಾಗಲೇ ಫುಲ್ ಬುಕ್ಕಿಂಗ್ ಆಗಿವೆ.
ಚಿಕ್ಕಮಗಳೂರಲ್ಲಿ ಎಲ್ಲಿ ನೋಡಿದರೂ ಪ್ರವಾಸಿಗರು ಕಂಡುಬರುತ್ತಿದ್ದಾರೆ. ಇಯರ್ ಎಂಡ್ ಆಗಿರುವುದರಿಂದ ರಾಜ್ಯದ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯಲ್ಲಿ ಜನಸಾಗರವೇ ಸೇರುತ್ತಿದೆ. ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಬ್ಯುಸಿ ಆಗಿವೆ. ಬಹುತೇಕರು ಇಲ್ಲಿಗೆ ಬಂದು ಇಯರ್ಎಂಡ್, ನ್ಯೂ ಇಯರ್ ಆಚರಣೆ ಹಾಗೂ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ.
10-15 ದಿನಗಳ ಹಿಂದೆ ಹಾಗೂ ಇನ್ನೂ ಕೆಲವರು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಿದ್ದಾರೆ. ಕಾಫಿನಾಡಲ್ಲಿರುವ ಸುಮಾರು 1400 ಕ್ಕೂ ಅಧಿಕ ಹೋಂ ಸ್ಟೇ ಹಾಗೂ 200 ಕ್ಕೂ ಹೆಚ್ಚು ರೆಸಾರ್ಟ್‍ಗಳು ಬಹುತೇಕ ಬುಕ್ ಆಗಿವೆ. ಡಿಸೆಂಬರ್ ತಿಂಗಳಲ್ಲಿ ಕಾಫಿನಾಡಿಗೆ 11 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೆ, ಡಿಸೆಂಬರ್ 30-31 ಹಾಗೂ ಜನವರಿ 1ರ ಮೂರೇ ದಿನದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಬರಲಿದ್ದಾರೆ.