ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ದೃಢಟಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಎರಡು ಪ್ರಕರಣ ಪತ್ತೆಯಾದರೆ, ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. 50 ವರ್ಷದ ಪುರುಷ, 72 ವರ್ಷದ ಮಹಿಳೆ, 52 ವರ್ಷದ ಪುರುಷ ಇವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ತರೀಕೆರೆ ತಾಲೂಕಿನ ಅಜ್ಜಂಪುರದ 72 ವರ್ಷದ ವಯೋವೃದ್ಧೆಯೊಬ್ಬರು ಉಸಿರಾಟದ ತೊಂದರೆಯಿಂದ ನಿನ್ನೆ ಸಂಜೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ವೃದ್ಧೆ ಸಾವನ್ನಪ್ಪಿದ್ದಾರೆ. ಇವರ ಇವರ ಗಂಟಲ ದ್ರವ ಹಾಗೂ ರಕ್ತ ಪರೀಕ್ಷೆಯನ್ನು ಹಾಸನಕ್ಕೆ ಕಳುಹಿಸಿಕೊಡಲಾಗಿತ್ತು. ಸಂಜೆ ವೇಳೆಗೆ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದೆ.
ಇಂದು ಕೊರೊನಾ ಪತ್ತೆಯಾದ ಮೂರು ಜನರಲ್ಲಿ ಇಬ್ಬರಿಗೆ ಪ್ರಾರ್ಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದು, ಮತ್ತೊಬ್ಬರು ಮಹಾರಾಷ್ಟ್ರ ಮೂಲದಿಂದ ಬಂದವರಾಗಿದ್ದಾರೆ. ಇವರು ವಾಸ ಮಾಡುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಜಿಲ್ಲಾ ಆರೋಗ್ಯ ಇಲಾಖೆ ಈ ಮೂರು ಜನರ ಜೊತೆ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಹುಡುಕುವ ಕಾರ್ಯ ಪ್ರಾರಂಭಿಸಿದೆ.
ಜಿಲ್ಲೆಯಲ್ಲಿ ಒಟ್ಟು 24 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 18 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.