ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿದ್ರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಾಫಿ ನಾಡಲ್ಲಿ ಕಾನೆಗಳು ಪ್ರತ್ಯಕ್ಷ.. ಭತ್ತದ ಗದ್ದೆ ಮೇಲೆ ದಾಳಿ..
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿ ಭತ್ತದ ಗದ್ದೆ ಹಾಳು ಮಾಡಿವೆ.
ಮೂಡಿಗೆರೆ ತಾಲೂಕಿನ ಗೌಡಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಕಾಫಿ ತೋಟದ ಮಧ್ಯೆ ಓಡಾಡುವುದನ್ನ ನೋಡಿದ ತೋಟದ ಮಾಲೀಕರು ಹಾಗೂ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿದ್ದು ಗೌಡಳ್ಳಿ, ಹೆಮ್ಮದಿ, ಸತ್ತಿಗನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಂದಲೆ ನಡೆಸಿವೆ.
ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಕಾಫಿ, ಭತ್ತದ ಬೆಳೆ ನಾಶವಾಗಿದ್ದು, ರೈತರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ಈ ಹಿಂದೆ ಕುಂಬರಡಿ ಗ್ರಾಮ, ಗೌಡಳ್ಳಿ, ಭೈರಾಪುರ ಗ್ರಾಮದಲ್ಲಿ ಆನೆ ಕಾಣಿಸಿಕೊಳ್ಳುತ್ತಿತ್ತು. ಈಗ ಮತ್ತೆ ಕಾಡಾನೆ ಕಾಣಿಸಿಕೊಂಡಿರುವುದರಿಂದ ಜನರು ರಸ್ತೆಯಲ್ಲಿ ಸಂಚರಿಸುವುದಕ್ಕೂ ಭಯ ಪಡುವಂತಾಗಿದೆ. ಆನೆಗಳನ್ನ ಕಾಡಿಗಟ್ಟುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿನ್ನ ಸಾರ್ವಜನಿಕರು ಒತ್ತಾಯಿಸಿದ್ದಾರೆ.