ಚಿಕ್ಕಮಗಳೂರು:ಪ್ರತಿ ವರ್ಷದೀಪಾವಳಿ ಸಮಯದಲ್ಲಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಬೆಟ್ಟದ ದೇವಿರಮ್ಮ ದೇವಸ್ಥಾನ ತೆರೆಯಲಾಗಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ 3 ಸಾವಿರ ಅಡಿಗಳಷ್ಟು ಎತ್ತರದ ಗುಡ್ಡದಲ್ಲಿರುವ ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇದ್ದು, ದೇವಿಯನ್ನು ನೋಡಲು ಜನಸಾಗರವೇ ಹರಿದು ಬಂದಿದೆ.
ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಸೌಲಭ್ಯ ಹಾಗೂ ಭದ್ರತೆ ಒದಗಿಸಿದೆ. ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುತ್ತಿದ್ದರು. ಆದರೆ, ಈ ವರ್ಷ ಮಧ್ಯ ರಾತ್ರಿಯಿಂದಲೇ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಅಂದಾಜು 80 ಸಾವಿರ ದಾಟಿದೆ. ಸಂಜೆ ವೇಳೆಗೆ ಲಕ್ಷದ ಗಡಿಯೂ ಮುಟ್ಟುವ ಸಾಧ್ಯತೆಯಿದೆ. ದೀಪಾವಳಿ ಅಮವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರೋ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯುತ್ತದೆ. ಆ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಆಗಮಿಸುತ್ತಾರೆ.
ಹರಕೆ ಕಟ್ಟಿದ ಭಕ್ತರು ಇಲ್ಲಿಗೆ ಒಂದು ದೇವಿಗೆ ಹರಕೆ ತೀರಿಸುತ್ತಾರೆ. ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಹಿಂದಿನ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತೋಕೆ ಶುರು ಮಾಡಿ ದೇವಿಯ ದರ್ಶನ ಪಡೆದು, ಕೆಳಗಿಳಿಯುತ್ತಾರೆ. ಬೆಟ್ಟವನ್ನೇರುವಾಗಿ ಕೊಂಚ ಎಡವಿದರೂ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ.