ಚಿಕ್ಕಮಗಳೂರು:''ಮಂಡ್ಯ ಒಂದಲ್ಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆದಿದ್ದು, ನಮ್ಮ ಅಭ್ಯರ್ಥಿಗಳನ್ನು ಯಾವ ರೀತಿ ವಿಶ್ವಾಸ ತೆಗೆದುಕೊಳ್ಳಬೇಕು ಎಂಬ ಚರ್ಚೆ ನಡೆದಿದೆ. ರಾಮ ಮಂದಿರ ಉದ್ಘಾಟನೆ ಚುನಾವಣೆಯ ಮುಂಚೂಣಿಗೆ ಬರುತ್ತದೆ. ಈ ಹಿಂದೆ ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಗೂ, ಈಗಿನ ಹೊಂದಾಣಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ - ಜೆಡಿಎಸ್ ಸ್ವಾಭಾವಿಕ ಮೈತ್ರಿ ಆಗಿದೆ. ಇದು ಎಲ್ಲ ಕಾರ್ಯಕರ್ತರಲ್ಲಿ ಖುಷಿ ತಂದಿದೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಕಳೆದ ಮೂರು ದಿನದ ಹಿಂದೆ ಚಿಕ್ಕಮಗಳೂರಿಗೆ ಆಗಮಿಸಿದ ಮೂರು ದಿನಗಳ ಕಾಲ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು (ಗುರುವಾರ) ಬೆಂಗಳೂರಿಗೆ ಹೊರಡುವ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಹೋಗ್ತಿಲ್ಲ. ಅದು ಯಾವ ಕಾರಣಕ್ಕೆ ಹೋಗ್ತಿಲ್ಲ ಎಂಬುದನ್ನು ಸಾರ್ವಜನಿಕರಿಗೆ ಅವರೇ ಹೇಳ್ತಾರೆ. ಅದು ನನಗೆ ಸಂಬಂಧವಿಲ್ಲ. ಇದು ನಾಡ ಹಬ್ಬ, ದೇಶದ ಹಬ್ಬ, ಉತ್ಸಾಹ ಹೇಗಿದೆ ಎಂದರೆ ರಾಮ ರಾಜ್ಯವಾಗಬೇಕು ಎಂಬ ಜನಾಭಿಪ್ರಾಯವಿದೆ. ಅದಕ್ಕೆ ನಾನು ಕೈಜೋಡಿಸ್ತೇನೆ'' ಎಂದರು.
''ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಬೇಕು ಎಂಬ ಕಾರ್ಯಕರ್ತರ ಒತ್ತಡವಿದ್ದು, ಕಳೆದ ಬಾರಿಯ ಲೋಕಸಭೆ ಎಲೆಕ್ಷನ್ ಬೇರೆ, ಈ ಚುನಾವಣೆಯೇ ಬೇರೆ, ಇವತ್ತು ಮಂಡ್ಯದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತ ಗೆಲ್ಲುವ ವಾತಾವರಣ ಇದೆ. ಕಳೆದ ಬಾರಿ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ಜೆಡಿಎಸ್ ಬಿಟ್ಟು 2 ರಿಂದ 3 ಪರ್ಸೆಂಟ್ ಮತದಾರರು ಮಾತ್ರ ನಮ್ಮ ಪರ ಇದ್ದರು. ಈಗ ಮಂಡ್ಯದಲ್ಲಿ ಆ ವಾತಾವರಣ ಇಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತ ಕೂಡ ಸ್ಪರ್ಧಿಸಿದರೂ ಕೂಡ ಗೆಲ್ಲುತ್ತಾನೆ. ಹೊಂದಾಣಿಕೆಯ ಮಾತುಕತೆಯ ಬಳಿಕ ಎಲ್ಲಿ ಮತ್ತು ಯಾರು ಸ್ಪರ್ಧೆ ಮಾಡಬೇಕು ಎನ್ನುವ ತೀರ್ಮಾನ ಮಾಡುತ್ತೇವೆ'' ಎಂದು ತಿಳಿಸಿದರು.