ಚಿಕ್ಕಮಗಳೂರು:ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯೋರ್ವರ ಮಾಂಗಲ್ಯ ಸರವನ್ನು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ನಗರದ ಹೊರ ವಲಯದ ತೇಗೂರು ಗ್ರಾಮದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 11 ರಂದು ರಾತ್ರಿ 11.45 ರ ವೇಳೆಗೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ ವೇಳೆ ಅವರ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಆಸ್ಪತ್ರೆಯ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಸರ್ಜನ್ ಹಾಗೂ ಡಿಹೆಚ್ಒಗೂ ದೂರು ನೀಡಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಕೂಡ ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ. ಮಹಿಳೆ ಜೀವಂತವಿದ್ದಾಗ ಆಕೆಯ ಕುತ್ತಿಗೆಯಲ್ಲಿ ಮಾಂಗಲ್ಯ ಸರವಿದ್ದ ಪೋಟೋವನ್ನು ಕುಟುಂಬಸ್ಥರು ಜಿಲ್ಲಾ ಸರ್ಜನ್ಗೆ ತೋರಿಸಿದ್ದಾರೆ. ಈ ಕುರಿತು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ತನಿಖೆ ಕೈಗೊಂಡಿದ್ದು, ಮಹಿಳೆ ಮೃತಪಟ್ಟ ವೇಳೆಯಲ್ಲಿ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ಮಾಡಿದ್ದಾರೆ.
ಡಿಹೆಚ್ಒಗೆ ದೂರು ನೀಡಿದ ಕುಟುಂಬಸ್ಥರು ಮಹಿಳೆ ಮೃತಪಟ್ಟ ದಿನ ಆಸ್ಪತ್ರೆಯ ವಾರ್ಡ್ನ ಸುತ್ತಮುತ್ತ ಇಬ್ಬರು ಸಿಬ್ಬಂದಿ ಅನುಮಾನಸ್ಪದವಾಗಿ ಓಡಾಡಿದ್ದಾರೆ ಎಂದು ಹೇಳಲಾಗಿದೆ. ಆ ಬಗ್ಗೆ ಜಿಲ್ಲಾ ಸರ್ಜನ್ ತನಿಖೆ ಮುಂದುವರಿಸಿದ್ದಾರೆ. ಮೃತ ಮಹಿಳೆಯ ಕುಟುಂಬ ಸದಸ್ಯರು ತಿಥಿ ಕಾರ್ಯ ಮಾಡಲು ಪೂಜೆಗಾಗಿ ಮಾಂಗಲ್ಯ ಸರವನ್ನು ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಜೊತೆ ಪಟ್ಟು ಹಿಡಿದಿದ್ದಾರೆ. ಆದರೆ, ಮಹಿಳೆಯ ಸರ ಕದ್ದವರು ಯಾರೂ ಎಂಬುವುದು ಇನ್ನೂ ಗೊತ್ತಾಗಿಲ್ಲ.
ಮಹಿಳೆ ಮೃತಪಟ್ಟ ದಿನ ಓರ್ವ ನೈಟ್ ಡಾಕ್ಟರ್, ಸ್ಟಾಫ್ ನರ್ಸ್, ಓರ್ವ ಹೌಸ್ ಕೀಪಿಂಗ್ ಬಾಯ್ ಮತ್ತು ಬಾಡಿ ಶಿಫ್ಟ್ ಮಾಡುವ ನಾಲ್ವರು ಸಿಬ್ಬಂದಿ ಕರ್ತವ್ಯದಲ್ಲಿದ್ದರು.