ಚಿಕ್ಕಮಗಳೂರು ನಗರದಲ್ಲಿ ಪೊಲೀಸರಿಂದ ಭಾರಿ ಪ್ರತಿಭಟನೆ ಚಿಕ್ಕಮಗಳೂರು: ಪೊಲೀಸರಿಗೆರಕ್ಷಣೆ ನೀಡುವಂತೆ ಒತ್ತಾಯಿಸಿ ಶನಿವಾರ ಸಂಜೆ ದಿಢೀರ್ ಕೆಲಸ ನಿಲ್ಲಿಸಿದ ಚಿಕ್ಕಮಗಳೂರು ನಗರದ 6 ಠಾಣೆ ಪೊಲೀಸರು, ನಗರದ ಠಾಣೆ ಎದುರು ಜಮಾಯಿಸಿ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ನಗರಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆರು ಜನ ಪೊಲೀಸರ ಅಮಾನತುಗೊಳಿಸಿರುವುದನ್ನು ಕೈಬಿಡಬೇಕು, ಪೊಲೀಸರನ್ನು ಬಂಧಿಸಬಾರದು. ಪೊಲೀಸರ ಮೇಲೆ ಹಲ್ಲೆ ನಡೆಸಿದ ವಕೀಲರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವವರೆಗೂ ಕರ್ತವ್ಯಕ್ಕೆ ತೆರಳುವುದಿಲ್ಲ ಎಂದು ಪೊಲೀಸರು ಪಟ್ಟುಹಿಡಿದು ಕುಳಿತರು.
ರಸ್ತೆ ತಡೆ ನಡೆಸಿ ಆಕ್ರೋಶ:ಠಾಣೆಗೆ ಆಗಮಿಸಿದ್ದ ಕೆಲ ವಕೀಲರು, ಶಸ್ತ್ರಾಗಾರಕ್ಕೂ ನುಗ್ಗಿದ್ದರು. ಈ ವೇಳೆ ಅವರನ್ನು ತಡೆಯಲು ಹೋದ ಸಂದರ್ಭದಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ, ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಪೊಲೀಸರು ದೂರಿದ್ದಾರೆ. ತನಿಖೆ ಏಕಮುಖವಾಗಿ ಸಾಗುತ್ತಿದ್ದು, ಠಾಣಾಧಿಕಾರಿಗೆ ಮೊದಲು ಕಪಾಳಮೋಕ್ಷ ಮಾಡಿದ ವಕೀಲ ಸೇರಿದಂತೆ ಠಾಣೆಯಲ್ಲಿ ಎಲ್ಲೇ ಮೀರಿ ವರ್ತಿಸಿದ ಎಲ್ಲ ವಕೀಲರ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸುವಂತೆ ಪೊಲೀಸರು ಪಟ್ಟು ಹಿಡಿದಿದ್ದಾರೆ.
ಪೊಲೀಸರು ವರಿಷ್ಠಾಧಿಕಾರಿಗಳ ಎದುರೇ ಟೇಬಲ್ ಕುಟ್ಟಿ, ವಕೀಲರ ವಿರುದ್ಧ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದರು. ಅಮಾನತಾಗಿರುವ ಪೊಲೀಸ್ ಪೇದೆ ಗುರುಪ್ರಸಾದನನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮನೆಗೆ ಹಾಜರುಪಡಿಸುವ ಮಾಹಿತಿ ಆಧಾರದ ಮೇಲೆ ನಗರ ಠಾಣೆಯಿಂದ ಡಿವೈಎಸ್ಪಿ ಕಚೇರಿಗೆ ತೆರಳಿದ ಸಿಬ್ಬಂದಿ, ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಐಜಿಪಿ, ಎಸ್ಪಿ ಮಾತಿಗೂ ಜಗ್ಗದ ಪ್ರತಿಭಟನಾನಿರತರು:ಜಿಲ್ಲೆಯ 800 ಪೊಲೀಸರು ಒಂದಾಗಿದ್ದು, ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಸ್ಥಳದಲ್ಲಿ ಪಶ್ಚಿಮ ವಲಯದ ಐಜಿಪಿ ಡಾ.ಚಂದ್ರಗುಪ್ತ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರಾದರೂ ಪೋಲಿಸರು ಪಟ್ಟು ಸಡಿಲಿಸಲಿಲ್ಲ. ಇನ್ನು ವಕೀಲರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಿದ ಘಟನೆ ಖಂಡಿಸಿ ಕುಟುಂಬಸ್ಥರು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಇದನ್ನೂಓದಿ:ವಕೀಲನ ಮೇಲೆ ಹಲ್ಲೆ ಆರೋಪ: ಪಿಎಸ್ಐ, ಎಎಸ್ಐ ಸೇರಿ ಆರು ಸಿಬ್ಬಂದಿ ಅಮಾನತುಗೊಳಿಸಿದ ಎಸ್ಪಿ
ನ.30 ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ಮಾರ್ಕೆಟ್ ರಸ್ತೆಯಲ್ಲಿನ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೇ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನು ಪೊಲೀಸರು ಪ್ರಶ್ನಿಸಿದ್ದರು. ಆಗ ಪೊಲೀಸರು ಮತ್ತು ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಠಾಣೆ ಎದುರೇ ಈ ಘಟನೆ ನಡೆದಿದ್ದರಿಂದ ಪೊಲೀಸರು, ವಕೀಲನನ್ನು ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆಂದು ವಕೀಲರ ಸಂಘ ಆರೋಪಿಸಿದೆ. ವಕೀಲ ಪ್ರೀತಂ ಎದೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಡಿವೈಎಸ್ಪಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರೀತಂ ಅವರ ಹೇಳಿಕೆ ಆಧಾರದ ಮೇಲೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ಡಿವೈಎಸ್ಪಿಗೆ ವಹಿಸಲಾಗಿದೆ. ಸಿಬ್ಬಂದಿ ಮೇಲೆ ಕೇಳಿ ಬಂದಿರುವ ಆರೋಪದ ಮೇರೆಗೆ ಪಿಎಸ್ಐ, ಎಎಸ್ಐ, ಹೆಡ್ಕಾನ್ಸ್ಸ್ಟೇಬಲ್ ಮತ್ತು ಮೂವರು ಪೊಲೀಸ್ ಕಾನ್ಸ್ಸ್ಟೇಬಲ್ಗಳನ್ನು ಅಮಾನತು ಮಾಡಿ ಎಸ್ಪಿ ವಿಕ್ರಮ ಅಮಟೆ ಆದೇಶಿಸಿದ್ದರು.