ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಸಂಸೆ, ನೆಲ್ಲಿಬೀಡು, ಎಳನೀರು, ಬಸ್ರಿಕಲ್ಲು, ಕೆಂಗನಕೊಂಡ, ಬಡಮನೆ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅಡಿಕೆ ಮರಗಳು ಹಳದಿ ಬಣ್ಣ ಪಡೆದುಕೊಂಡು ಸಂಪೂರ್ಣ ಒಣಗಿ ಹೋಗುತ್ತಿವೆ.
ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಈ ರೋಗ ಇದೀಗ ನೂರಾರು ಎಕರೆ ಅಡಿಕೆ ತೋಟಗಳಲ್ಲಿ ತನ್ನ ಅಟ್ಟಹಾಸ ತೋರಿಸುತ್ತಿದೆ. ಈಗಾಗಲೇ ಅತಿಹೆಚ್ಚು ಮಳೆ, ಹಳದಿ ರೋಗ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಯಿಂದ ತತ್ತರಿಸಿ ಹೋಗಿರುವ ರೈತ ಇದೀಗ ಈ ಹೊಸದಾದ ರೋಗದಿಂದ ಮತ್ತಷ್ಟು ಕಂಗಲಾಗಿದ್ದಾನೆ.
ಮೂಡಿಗೆರೆ ತಾಲೂಕಿನಾದ್ಯಂತ ಅಡಿಕೆ ಮರಗಳು ಹಳದಿ ಬಣ್ಣ ಪಡೆದುಕೊಂಡು ಸಂಪೂರ್ಣ ಒಣಗಿ ಹೋಗುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಅಡಿಕೆ ತೋಟ ಇದೀಗ ಹಳದಿ ಬಣ್ಣಕ್ಕೆ ವಾಲಿದೆ. ಮೊದ ಮೊದಲು ಕೆಲವೆಡೆ ಮಾತ್ರ ಕಂಡು ಬಂದ ಈ ರೋಗ ಇದೀಗ ತನ್ನ ವ್ಯಾಪ್ತಿಯನ್ನು ಎಲ್ಲೆಡೆ ವ್ಯಾಪಿಸಿದೆ. ಗಾಳಿಯ ಮೂಲಕ ಇದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತಿದ್ದು, ತಡೆಯಲು ಸಾಧ್ಯವಾಗ್ತಿಲ್ಲ ಎಂದು ರೈತರು ಅಸಹಾಯಕತೆ ತೋರಿದ್ದಾರೆ.
ಒಟ್ಟಾರೆಯಾಗಿ ಕಣ್ಣಿಗೆ ಕಾಣದ ಹೆಮ್ಮಾರಿ ಕೊರೊನಾ ಹೇಗೆ ಜನರನ್ನು ಬಲಿ ಹಾಕ್ತಿದ್ಯೋ ಅದೇ ರೀತಿ ಕಣ್ಣಿಗೆ ಕಾಣದ ಈ ವೈರಸ್ ಕೂಡ ಅಡಿಕೆ ಬೆಳೆಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಇನ್ನು ತಾನು ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಣೆದುರೇ ಬಲಿಯಾಗ್ತಿರೋದನ್ನು ಕಂಡು ಬೆಳೆಗಾರರ ಕಂಗಾಲಾಗಿದ್ದಾನೆ.