ಚಿಕ್ಕಮಗಳೂರು: ರಾಜ್ಯದಲ್ಲಿ ಪುರಾಣ ಪ್ರಸಿದ್ಧ ಇತಿಹಾಸ ಹೊಂದಿರುವ ಪಾರಂಪರಿಕ ದೇವಸ್ಥಾನಗಳು ಹಾಗೂ ವಾಸ್ತುಶಿಲ್ಪಗಳನ್ನು ಸಂರಕ್ಷಣಾ ಯೋಜನೆಯ ಹೆಸರಿನಲ್ಲಿ ಸಂರಕ್ಷಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳ ಮಚ್ಚೇರಿ, ಹಿರೇನಲ್ಲೂರು, ಆಸಂದಿ, ಬಗ್ಗವಳ್ಳಿ, ಅಮೃತಾಪುರ, ಸೋಂಪುರದಲ್ಲಿರುವ ಪುರಾಣ ಪ್ರಸಿದ್ಧ ಪ್ರಾಚೀನ ದೇವಾಲಯಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಹೊಯ್ಸಳರು, ಕದಂಬರು, ಚೋಳರು, ಚಾಲುಕ್ಯರು ಸೇರಿದಂತೆ ವಿವಿಧ ರಾಜ ಮನೆತನಗಳು ಆಳ್ವಿಕೆ ನಡೆಸಿ ಆ ಕಾಲದಲ್ಲಿ ನಿರ್ಮಿತವಾದ ಪ್ರಸಿದ್ಧ ಪ್ರಾಚೀನ ಇತಿಹಾಸದ ದೇವಾಲಯಗಳಿದ್ದು, ಅವುಗಳನ್ನು ಉಳಿಸುವ ಹೊಣೆ ನಮ್ಮೆಲ್ಲರದಾಗಿದೆ. ಅವುಗಳ ಮೂಲ ಸ್ವರೂಪ ವಿರೂಪವಾಗದಂತೆ ಜೀರ್ಣೋದ್ಧಾರ ಕೈಗೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ 1400ಕ್ಕೂ ಹೆಚ್ಚು ದೇವಾಲಯಗಳಿದ್ದು, ಇವುಗಳನ್ನು ಹೊರತುಪಡಿಸಿಯೂ ಸಹ ಹಲವು ದೇವಾಲಯಗಳಿವೆ. ಇವುಗಳ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು. ಪ್ರಾಚೀನ ಮತ್ತು ಪುರಾತನ ದೇವಾಲಯಗಳ ಸಂರಕ್ಷಣೆಗೆ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಸಂರಕ್ಷಣಾ ಯೋಜನೆ ತೆರೆದು ಪುರಾತನ ದೇವಾಲಯ ಹಾಗೂ ವಾಸ್ತುಶಿಲ್ಪಗಳ ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಪುರಾತತ್ವ ಇಲಾಖೆ ಹಾಗೂ ಧರ್ಮೋತ್ಥಾನ ಟ್ರಸ್ಟ್ ಜೊತೆಯಾಗಿ ಒಡಂಬಡಿಕೆ ಮಾಡಿಕೊಂಡು ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕೋವಿಡ್-19 ಕಾರಣದಿಂದಾಗಿ ಈ ಬಾರಿ ಅನುದಾನದ ಕೊರತೆ ಇದ್ದು, ಸದ್ಯ ಆದ್ಯತೆ ಮೇರೆಗೆ ಆಯ್ದ ಪ್ರಸಿದ್ಧ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಉಳಿದವುಗಳನ್ನು ಹಂತ ಹಂತವಾಗಿ ಜೀರ್ಣೋದ್ಧಾರ ಮಾಡಲಾಗುವುದು ಎಂದರು.