ಚಿಕ್ಕಮಗಳೂರು :ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಆನೆಗಳನ್ನು ಓಡಿಸಲು ಹೋದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ. ಇದರಿಂದ ಬೇಸತ್ತಿರುವ ರೈತರು, ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರತಿನಿತ್ಯ ಹರಸಾಹಸ ಪಡುತ್ತಿದ್ದಾರೆ. ಇದೇ ರೀತಿ ಕಾಡಾನೆಗಳನ್ನು ಓಡಿಸಲು ಹೋಗಿ ಇದೀಗ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ಯಶವಂತ್ (50) ಎಂಬ ಬೈರಾಪುರದ ವ್ಯಕ್ತಿ ತನ್ನ ಜಮೀನಿಗೆ ಬಂದಿದ್ದ ಆನೆಗಳನ್ನು ಓಡಿಸಲು ಹೋಗಿದ್ದರು ಎಂದು ಮನೆಯವರು ತಿಳಿಸಿದಾರೆ. ರಾತ್ರಿ ಆನೆಗಳನ್ನು ಓಡಿಸಲು ಹೋದ ಯಶವಂತ್ ಎಷ್ಟು ಹೊತ್ತಾದರೂ ಮನೆಗೆ ಬಾರದ್ದನ್ನು ಕಂಡ ಮನೆಯವರು ಕಂಗಾಲಾಗಿ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಧಿಕಾರಿಗಳೂ ಸರಿಯಾಗಿ ಸ್ಪಂದಿಸದ ಹಿನ್ನೆಲೆ ಕುಟುಂಬಸ್ಥರು ಇಲಾಖೆಯ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಆನೆಗಳನ್ನು ಓಡಿಸಲು ಹೋದ ವ್ಯಕ್ತಿ ಎಲ್ಲಿ ಹೋದರು? ಏನಾದರು?ಎಂಬ ಬಗ್ಗೆ ಯಾವುದೇ ಸುಳಿವು ತಿಳಿದು ಬಂದಿಲ್ಲ. ಎನ್ಆರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸಹ ಕಾರ್ಯಪ್ರವೃತ್ತರಾಗಿದ್ದಾರೆ.