ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪವಿರುವ ಹೆಬ್ಬಾಳೆ ಸೇತುವೆ ಮಳೆಗಾಲದಲ್ಲಿ ದಿನಕ್ಕೆ ಐದರಿಂದ, ಆರು ಬಾರಿ ಮುಳುಗಡೆಯಾಗುತ್ತದೆ. ಹೀಗಾಗಿ ಸೇತುವೆ ಕುಸಿದು ಬೀಳಲಿದೆ ಎಂಬ ಆತಂಕ ಸ್ಥಳೀಯರಲ್ಲಿದೆ.
ಮಳೆಗಾಲ ಪ್ರಾರಂಭವಾದರೆ ಸಾಕು ಭದ್ರಾ ನದಿ ಉಕ್ಕಿ ಹರಿಯುತ್ತದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಹೆಬ್ಬಾಳ ಸೇತುವೆ, ಆಗಸ್ಟ್ ತಿಂಗಳು ಬಂತೆಂದರೆ ಸಾಕು, ಇಲ್ಲಿನ ಸುತ್ತಮುತ್ತಲ ಹಳ್ಳಿಯ ಜನರು ನರಕಯಾತನೆ ಅನುಭವಿಸುತ್ತಾರೆ. ಸೇತುವೆ ಸಂಪೂರ್ಣ ಮುಳುಗಡೆ ಆಗುವುದರಿಂದ ಯಾರು ಎಲ್ಲಿಯೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅವನತಿಯ ಅಂಚಿನಲ್ಲಿ ಹೆಬ್ಬಾಳೆ ಸೇತುವೆ: ಸ್ಥಳೀಯರಿಗೆ ಆತಂಕ ಸೇತುವೆಗೆ ಯಾವುದೇ ರೀತಿಯ ತಡೆಗೋಡೆಗಳಿಲ್ಲ. ರಾತ್ರಿ ವೇಳೆ ವಾಹನ ಸಂಚಾರದಲ್ಲಿ ಸ್ವಲ್ಪ ಆಯತಪ್ಪಿದರೂ ದೊಡ್ಡ ಅನಾಹುತವೇ ಆಗಲಿದೆ. ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳು ಹೆಚ್ಚು ಈ ರಸ್ತೆ ಬಗ್ಗೆ ಅರಿವಿಲ್ಲದೆ ಅನಾಹುತಕ್ಕೆ ತುತ್ತಾಗಿದ್ದಾರೆ.
ಸದ್ಯ ಸೇತುವೆಯು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಅವನತಿಯ ಅಂಚಿನಲ್ಲಿದೆ. ಸ್ಥಳೀಯರು ಈ ಕುರಿತು ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಷ್ಟೇ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಗಳು ನಡೆಯುವ ಮೊದಲೇ, ಸರ್ಕಾರ ಇತ್ತ ಗಮನ ಹರಿಸಿ ಈ ಸೇತುವೆಯನ್ನು ಮೇಲಕ್ಕೆ ಎತ್ತರಿಸುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ..ಭವಿಷ್ಯದ ಸಿಎಂ ಪಟ್ಟದ ಮೇಲೆ ಕಣ್ಣು.. ಅಖಾಡಕ್ಕೆ ಸೈಲೆಂಟ್ ಸತೀಶ್ ಸೈ.. ಕೈ-ಕಮಲ 'ಬೈ'ಟು ಫೈಟು!!