ಚಿಕ್ಕಮಗಳೂರು :ನಗರದ ಹೊರವಲಯದ ಚುರ್ಚೆ ಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿದ್ದ ಶ್ರೀಗಂಧದ ಮರಗಳು ರಾತ್ರೋರಾತ್ರಿ ಕಳ್ಳರ ಪಾಲಾಗುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯ ಹೊರವಲಯದಲ್ಲಿರುವ ಚುರ್ಚೆ ಗುಡ್ಡ ಕರ್ನಾಟಕದ ಶ್ರೀಗಂಧಕ್ಕೆ ಜಗತ್ತಿನೆಲ್ಲೆಡೆಯಿಂದ ಬೇಡಿಕೆ ಇದೆ. ದೇಶದಲ್ಲಿಯೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ರಾಜ್ಯ ಕರ್ನಾಟಕ. ಚಿಕ್ಕಮಗಳೂರು ಜಿಲ್ಲೆ ಶ್ರೀಗಂಧದ ಮರಗಳಿಗೂ ಹೆಸರುವಾಸಿಯಾದ ಜಿಲ್ಲೆ. ಇಲ್ಲಿನ ಚುರ್ಚೆಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲಾಗಿದೆ. ಆದ್ರೆ, ಈ ಗುಡ್ಡಕ್ಕೆ ರಾತ್ರೋ ರಾತ್ರಿ ದಾಂಗುಡಿ ಇಡುವ ಕಳ್ಳರು ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಯುವುದಕ್ಕಾಗಿ ಮತ್ತು ಅದರ ಪಾಲನೆ ಪೋಷಣೆಗಾಗಿ "ಸಿರಿಗಂಧ" ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದಕ್ಕಾಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಅರಣ್ಯ ಇಲಾಖೆ ವೆಚ್ಚ ಮಾಡುತ್ತಿದೆ. ಆದರೆ ಅದರ ಪಾಲನೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅರಣ್ಯ ಇಲಾಖೆಯಿಂದ ಆಗುತ್ತಿಲ್ಲ. ಸುವಾಸನೆಭರಿತ ಶ್ರೀಗಂಧದ ಚಕ್ಕೆಗಾಗಿ ಕಳ್ಳರು ಪುಟ್ಟಪುಟ್ಟ ಮರಗಳಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ಈ ಮೂಲಕ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ.
ಚಿಕ್ಕಮಗಳೂರಿನಲ್ಲಿ ಇರುವ ಲಕ್ಷಾಂತರ ಶ್ರೀಗಂಧದ ಗಿಡಗಳ ಪೋಷಣೆ, ಉಳಿಸಿಕೊಳ್ಳುವ ಜವಾಬ್ದಾರಿ ಹಾಗೂ ಹೊಣೆ ಎಲ್ಲರ ಮೇಲೂ ಇದೆ. ಶ್ರೀಗಂಧದ ಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆ ಪ್ರತಿದಿನ ಗಸ್ತು ತಿರುಗಿ ಕಳ್ಳತನ ತೆಡೆಯಲು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಿದೆ.