ಚಿಕ್ಕಮಗಳೂರು: ಮಳೆಯ ಆರ್ಭಟಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಸುಪ್ರೀತಾಳ ಮೃತದೇಹ ನಾಲ್ಕು ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಬಾಲಕಿ ಸುಪ್ರೀತಾ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು. ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ ಮುಂದುವರೆದಿದ್ದರೂ ಬಾಲಕಿಯ ಪತ್ತೆಯಾಗಿಲ್ಲ.
ನಿನ್ನೆ ಎಸ್ ಡಿ ಆರ್ ಎಫ್ ತಂಡವು ಆಗಮಿಸಿ ಶೋಧಕಾರ್ಯ ಮಾಡಿದ್ದು, ಸದ್ಯ ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆ ಗೆ ಸ್ಥಳೀಯರು ಸಾಥ್ ನೀಡಿದ್ದು, ಹೊಸಪೇಟೆ ಯಿಂದ ಮದಗದಕೆರೆ ವರೆಗೂ ಶೋಧಕಾರ್ಯ ಮುಂದುವರಿದಿದೆ.
ಇನ್ನು ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಎನ್.ಆರ್.ಪುರ, ಕೊಪ್ಪ ತಾಲೂಕಿನಲ್ಲಿ ಭಾರಿ ಮಳೆ ಆಗುತ್ತಿದ್ದು, ಚಿಕ್ಕಮಗಳೂರು, ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.