ಚಿಕ್ಕಮಗಳೂರು: ನಟ ದರ್ಶನ್ ಮನವಿ ಮತ್ತು ಮೃಗಾಲಯದ ಪ್ರಾಣಿ-ಪಕ್ಷಿಗಳ ಮೇಲೆ ಅವರಿಟ್ಟಿರುವ ಪ್ರೀತಿಗೆ ಅವರ ಅಭಿಮಾನಿಗಳು ಮನಸೋತಿದ್ದಾರೆ. ಅಷ್ಟೇ ಅಲ್ಲದೆ ದಚ್ಚು ಮಾತಿನಿಂದ ಪ್ರೇರಿತರಾದ ಜಿಲ್ಲೆಯ ದಂಪತಿ, ಮೈಸೂರು ಮೃಗಾಲಯದಲ್ಲಿ ಮೂರು ಪಕ್ಷಿಗಳನ್ನ ದತ್ತು ಪಡೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಾದ ಸಂದೀಪ್ ಹಾಗೂ ಪತ್ನಿ ಮೈಸೂರಿನ ಮೃಗಾಲಯದಲ್ಲಿ ಮೂರು ಪಕ್ಷಿಗಳನ್ನ ದತ್ತು ಸ್ವೀಕರಿಸಿದ್ದಾರೆ. ಸಂದೀಪ್ ವರ್ಷಕ್ಕೆ 10 ಸಾವಿರದಂತೆ ಎರಡು ಎಮು ಪಕ್ಷಿಗಳನ್ನು ದತ್ತು ಪಡೆದಿದ್ರೆ, ಅವರ ಪತ್ನಿ ವರ್ಷಕ್ಕೆ 4,300 ರೂ.ನಂತೆ ಒಂದು ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ. ಈಗಾಗಲೇ ದರ್ಶನ್ ಮಾತಿಗೆ ರಾಜ್ಯಾದ್ಯಂತ ನೂರಾರು ಜನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಅವರ ಅಭಿಮಾನಿಯಾಗಿ ಪ್ರಾಣಿ ಪಕ್ಷಿಗಳಿಗೆ ನಮ್ಮದೊಂದು ಕಿರುಕಾಣಿಕೆ ಅಂತಾರೆ ಸಂದೀಪ್.
ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದ ದರ್ಶನ್ ವರ್ಷಕ್ಕೆ ಮೂರ್ನಾಲ್ಕು ಬಾರಿ ಮೈಸೂರು ಮೃಗಾಲಯಕ್ಕೆ ಹೋಗಿ ಬರುತ್ತೇವೆ. ನಾವೇ ನೋಡಿ ಬಂದಿರುವ ಪ್ರಾಣಿಗಳು ಈಗ ಸಂಕಷ್ಟದಲ್ಲಿವೆ. ಕೊರೊನಾದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ ಇದೆ. ಪ್ರಾಣಿ-ಪಕ್ಷಿಗಳ ನಿರ್ವಹಣೆ ಕೂಡ ಕಷ್ಟವಾಗಿದೆ. ಹಾಗಾಗಿ, ನಾವು ಕೆಲ ಪಕ್ಷಿಗಳನ್ನು ದತ್ತು ಪಡೆದಿದ್ದೇವೆ. ಮುಂದಿನ ವರ್ಷ ಹುಲಿ, ಆನೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದೇವೆ ಎಂದು ಸಂದೀಪ್ ಹೇಳಿದರು.
ಒಂದು ಹುಲಿಗೆ ವರ್ಷಕ್ಕೆ ಒಂದು ಲಕ್ಷ, ಒಂದು ಆನೆಗೆ ಒಂದು ವರ್ಷಕ್ಕೆ 1.75 ಲಕ್ಷ ರೂ. ವೆಚ್ಚವಾಗಲಿದೆ. ಹೀಗೆ ದತ್ತು ಪಡೆಯುವುದರಿಂದ ತಮಗೆ ಆದಾಯ ತೆರಿಗೆ ಕೂಡ ಕಡಿಮೆಯಾಗಲಿದ್ದು, ವರ್ಷಕ್ಕೆ ಐದು ಜನಕ್ಕೆ ಎರಡು ಬಾರಿ ಫ್ರೀ ಪಾಸ್ ಕೂಡ ಸಿಗಲಿದೆ. ಜೊತೆಗೆ, ಸರ್ಟಿಫಿಕೇಟ್ ನೀಡುತ್ತಾರೆ ಎಂದು ಸಂದೀಪ್ ದಂಪತಿ ಸಂತಸ ವ್ಯಕ್ತಪಡಿಸಿದರು.
ಓದಿ..ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಚಾಲೆಂಜಿಂಗ್ ಸ್ಟಾರ್ ಮನವಿ.. ವಿಡಿಯೋ