ಚಿಕ್ಕಮಗಳೂರು:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನರ ಬದುಕು ಅತಂತ್ರವಾಗಿದ್ದು, ತಮ್ಮ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಕಾಫಿನಾಡಿಗರು ಅಕ್ಷರಶ: ಬೀದಿಗೆ ಬಿದ್ದಿದ್ದು, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಸಂತ್ರಸ್ತರಿಗಾಗಿ 3 ಸಾವಿರ ಚಪಾತಿ ತಯಾರಿಸಿದ ತರಿಕೆರೆಯ ಗ್ರಾಮಸ್ಥರು ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ನೆರೆ ಸಂತ್ರಸ್ತರಿಗೆ ನೀಡಲೆಂದು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಶ್ಯಾನುಭೋಗನಹಳ್ಳಿಯ ಗ್ರಾಮಸ್ಥರು ಮೂರು ಸಾವಿರ ಚಪಾತಿ ಹಾಗೂ ಒಣ ಕೊಬ್ಬರಿ ಚಟ್ನಿ ಪುಡಿ ತಯಾರಿಸಿದ್ದಾರೆ. ಜೊತೆಗೆ ಇವರೆಲ್ಲಾ ಅಕ್ಕಿ ಚೀಲ, ಮಂಡಕ್ಕಿ ಪೊಟ್ಟಣ, ಹೊಸ ಸೀರೆಗಳನ್ನು ಸಂತ್ರಸ್ತರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದು, ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ.
ನಿರಾಶ್ರಿತರಿಗೆ ತಾತ್ಕಾಲಿಕ ಚೆಕ್ ವಿತರಿಸಿದ ಜಿಲ್ಲಾಡಳಿತ ನಿರಾಶ್ರಿತರಿಗೆ ತಾತ್ಕಾಲಿಕ ಚೆಕ್ ವಿತರಣೆ:
ಎನ್ ಆರ್ ಪುರ ತಾಲೂಕಿನಲ್ಲಿ ನೂರಾರು ಸಂತ್ರಸ್ತರು ಬಾಳೆಹೊನ್ನೂರು ಹೋಬಳಿಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ಪಿ ಹರೀಶ್ ಪಾಂಡೆ, ಜಿಲ್ಲಾ ಪಂಚಾಯತ್ ಸಿಇಓ ಅಶ್ವಿತಿ ಹಾಗೂ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರು ನಿರಾಶ್ರಿತರ ಕೇಂದ್ರಕ್ಕೆ ನಿನ್ನೆ ಭೇಟಿ ನೀಡಿ ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದರು.
ಮನೆ ಹಾಗೂ ತೋಟವನ್ನು ಕಳೆದುಕೊಂಡ ಜನರಿಗೆ ಸರ್ಕಾರದಿಂದ ತಾತ್ಕಾಲಿಕ ಚೆಕ್ ವಿತರಿಸಿದರು. ಇದು ತಾತ್ಕಾಲಿಕವಾಗಿದ್ದು, ಬಳಿಕ ಸರ್ಕಾರದ ವತಿಯಿಂದ ಹಣ ಬರುತ್ತದೆ ಎಂಬ ಭರವಸೆ ನೀಡಿದ್ದಾರೆ. ಮಹಾ ಮಳೆ ಸೃಷ್ಟಿಸಿರುವ ಅವಾಂತರದಿಂದ ಯಾರೂ ಕುಗ್ಗಬೇಡಿ. ಎಲ್ಲರೂ ಧೈರ್ಯವಾಗಿರಿ, ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ನಿರಾಶ್ರಿತರಿಗೆ ಧೈರ್ಯ ತುಂಬಿದ್ರು.