ಚಿಕ್ಕಮಗಳೂರು: ಅಪಘಾತ ನಡೆದು ಕೋವಿಡ್ ವಾರಿಯರ್ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಅದೇ ಮಾರ್ಗವಾಗಿ ಹೋಗುತ್ತಿದ್ದ ತರೀಕೆರೆ ಶಾಸಕ ಕಾರಿನಿಂದ ಇಳಿಯದೆ ಅಮಾನವೀಯವಾಗಿ ವರ್ತಿಸಿದರು ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಶಾಸಕರ ಕಡೆಯಿಂದ ಸ್ಪಷ್ಟನೆ ದೊರೆತಿದೆ.
ಏನಿದು ಘಟನೆ ?
ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಯೊಬ್ಬರ ಬೈಕ್ಗೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ನಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿತ್ತು. ಅಪಘಾತದಿಂದ ಆರೋಗ್ಯಾಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಈ ವೇಳೆ ಅದೇ ದಾರಿಯಾಗಿ ತರೀಕೆರೆ ಶಾಸಕ ಸುರೇಶ್ ಕಾರಿನಲ್ಲಿ ಬಂದಿದ್ದರು. ಆರೋಗ್ಯಾಧಿಕಾರಿ ನೋವಿನಿಂದ ರಸ್ತೆಯಲ್ಲಿ ನರಳಾಡುತ್ತಿದ್ದರೂ ಶಾಸಕರು ಮಾತ್ರ ಕಾರಿನಿಂದ ಇಳಿಯದೆ ಅಮಾನವೀಯವಾಗಿ ವರ್ತಿಸಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಅಪಘಾತ ನಡೆದ ಅರ್ಧ ಗಂಟೆ ಬಳಿಕ ಆ್ಯಂಬುಲೆನ್ಸ್ ತರಿಸಿ ಗಾಯಾಳುವನ್ನು ಶಿವಮೊಗ್ಗದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.