ಚಿಕ್ಕಮಗಳೂರು: ಶೃಂಗೇರಿಯ ತಹಶೀಲ್ದಾರ್ ಅವರ ವಾಹನ ಚಾಲಕ ವಿಜೇತ್ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ಆತನ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿ ಸಂಬಂಧಿಕರು ಹಾಗೂ ಶೃಂಗೇರಿಯ ಜನರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಚಾಲಕ ವಿಜೇತ್ ಅವರ ಮೃತದೇಹವನ್ನು ಶೃಂಗೇರಿಯ ತಾಲೂಕು ಆಸ್ಪತ್ರೆ ಆವರಣದ ಮುಂಭಾಗದಲ್ಲಿರಿಸಿ ಪ್ರತಿಭಟನೆ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಗಳ ಕೈವಾಡದಿಂದಾಗಿ ಅಮಾಯಕ ಯುವಕನ ಬಲಿಯಾಗಿದೆ. ಹಾಗಾಗಿ ತಪ್ಪಿತಸ್ಥರಿಗೆ ಈ ಕೂಡಲೇ ಶಿಕ್ಷೆಯಾಗಬೇಕು. ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಯುವಕನ ಸಾವಿನ ಹಿಂದಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಎ.ಸಿ. ನಾಗರಾಜ್ ಅವರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ ಎಂದು ಕೂಗುವ ಮೂಲಕ ಕಿಡಿಕಾರಿದರು.