ಚಿಕ್ಕಮಗಳೂರು :ಜಗಳವಾಡಿ ತವರು ಮನೆಗೆ ಪತ್ನಿ ಹೋಗಿದ್ದಕ್ಕೆ ಕೋಪಗೊಂಡ ಪತಿರಾಯನೊಬ್ಬ ತವರು ಮನೆಗೆ ವಾಮಾಚಾರ ಮಾಡಿಸಿರುವ ವಿಚಿತ್ರ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದ ಸತೀಶ್ ಎಂಬುವರು ತನ್ನ ತಂಗಿ ಸುಮಿತ್ರಳನ್ನು 12 ವರ್ಷಗಳ ಹಿಂದೆ ಮರಸಣಿಗೆ ಗ್ರಾಮದ ಗುರುಮೂರ್ತಿ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆಯಾದಾಗಿನಿಂದಲೂ ಗಂಡ ಹೆಂಡತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ದೊಡ್ಡವರು ರಾಜಿ-ಪಂಚಾಯಿತಿ ಮಾಡುತ್ತಲೇ ಇದ್ದರು.
ಕಳೆದ ಒಂದು ತಿಂಗಳ ಹಿಂದೆ ಗಂಡ ಮತ್ತು ಹೆಂಡತಿ ಮಧ್ಯೆ ಮತ್ತೆ ಜಗಳವಾದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದರು. ಇದರಿಂದ ಕೋಪಗೊಂಡ ಪತಿ ಗುರುಮೂರ್ತಿ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಪತ್ನಿಯ ಅಣ್ಣ ಸತೀಶ್ ಮನೆಗೆ ಬಂದು ತನ್ನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೀಯಾ. ನಿನ್ನನ್ನು ಬಿಡುವುದಿಲ್ಲ ಎಂದು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದನು.
ಇದರಿಂದ ಗಾಬರಿಗೊಂಡ ಸತೀಶ್ ಕಿಟಕಿ ತೆಗೆದು ನೋಡಿದಾಗ ಗುರುಮೂರ್ತಿಯ ಕೂಗಾಟ ಕಾಣಿಸಿತ್ತು. ಕೂಡಲೇ ಸತೀಶ್ ಬಾಗಿಲು ತೆಗೆದು ಹೊರ ಬಂದಾಗ ಗುರುಮೂರ್ತಿ ಅಲ್ಲಿಂದ ಹೋಗಿದ್ದನು. ಮತ್ತೆ ಬೆಳಗಿನ ಜಾವ 6 ಗಂಟೆಗೆ ಮನೆಯಿಂದ ಹೊರ ಬಂದಾಗ ಮನೆ ಮುಂದೆ ಯಾವುದೋ ಪ್ರಾಣಿಯ ರಕ್ತ ಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಆರೋಪಿ ತಂದಿದ್ದ ಚಾಕುವನ್ನೂ ಅಲ್ಲೇ ಬಿಸಾಡಿ ಹೋಗಿದ್ದನು. ಇದರಿಂದ ಬೇಸತ್ತು ತಂಗಿಯ ಗಂಡನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸತೀಶ್ ಬಣಕಲ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ :Bengaluru crime: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ದರೋಡೆಕೋರನ ಬಂಧನ