ಚಿಕ್ಕಮಗಳೂರು:ವಾಮಾಚಾರದ ಉದ್ದೇಶಕ್ಕಾಗಿ ಎರಡು ಕಾಡು ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇಲೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾಮಾಚಾರದ ಉದ್ದೇಶಕ್ಕಾಗಿ 'ಗೂಬೆ' ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿ ಮಾರಟಕ್ಕೆ ಯತ್ನ! - ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ
ವಾಮಾಚಾರದ ಉದ್ದೇಶಕ್ಕಾಗಿ ಎರಡು ಕಾಡು ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.
ವಾಮಾಚಾರದ ಪೂಜೆಗೆ ಗೂಬೆಗಳು ಉತ್ತಮ ಎಂದು ರಾತ್ರಿಯ ಪೂಜೆಗೆಂದು ಗೂಬೆಯನ್ನು ಬೇಲೂರಿನಿಂದ ಚಿಕ್ಕಮಗಳೂರು ನಗರಕ್ಕೆ ತರುವ ವೇಳೆ ನಗರದ ಹೊರವಲಯದ ಹಿರೇಮಗಳೂರು ಬಳಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೇಲೂರಿನ ಚಂದನ್, ವಿಕಾಸ್ ಆಹಮ್ಮದ್, ವಸಂತ್ ಕುಮಾರ್, ಸಾಧಿಕ್ ಪಾಷ ಬಂಧಿತ ಆರೋಪಿಗಳು. ಇನ್ನು ಬಂಧಿತರಿಂದ ಒಂದು ಕಾರು, ನಾಲ್ಕು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಇದೇ ಮಾದರಿಯಲ್ಲಿ ಮಾಗಡಿ ಕೈಮರದಲ್ಲಿಯೂ ಅರಣ್ಯ ಇಲಾಖೆ ದಾಳಿ ಮಾಡಿ ಮತ್ತೊಂದು ಗೂಬೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭ ಸೋನಿ ಕುಮಾರ್, ಅಣ್ಣಪ್ಪ, ವಿನೋದ ಎಂಬ ಮಹಿಳೆಯನ್ನು ಬಂಧಿಸಿದ್ದು, ಪ್ರತ್ಯೇಕವಾಗಿ ಎರಡೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಗೂಬೆಗಳನ್ನು ಸುಮಾರು 30 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಚ್ಚರಿ ಅಂದರೆ ಐದು ಕಾಲಿನ ಗೊಬೆ ತುಂಬಾ ವಿಶೇಷ ಎಂಬ ನಂಬಿಕೆಯಿಂದ ಗೂಬೆಯ ಇನ್ನೊಂದು ಬೆರಳನ್ನು ಜೋಡಿಸಿ ಶಸ್ತ್ರ ಚಿಕಿತ್ಸೆ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.