ಕರ್ನಾಟಕ

karnataka

ETV Bharat / state

ಒಂದೇ ಜಾಗ, 15 ದಿನಗಳ ಅಂತರದಲ್ಲಿ 6 ಹಸುಗಳ ಸರಣಿ ಸಾವು.. ಕಾರಣ ನಿಗೂಢ - Uggehalli village under Gonibidu police station

ಹಸುಗಳ ಸರಣಿ ಸಾವು - ರೈತ ಕಂಗಾಲು - ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕರಣ - ನಿಗೂಢತೆ ಭೇದಿಸಲು ಪೊಲೀಸರಿಗೆ ದೂರು

dead cattle
ಸಾವನ್ನಪ್ಪಿರುವ ದನ

By

Published : Feb 11, 2023, 7:04 AM IST

ಚಿಕ್ಕಮಗಳೂರು :ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಉಗ್ಗೇಹಳ್ಳಿ ಗ್ರಾಮದಲ್ಲಿ ಆರು ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಉಗ್ಗೇಹಳ್ಳಿಯ ಸಂದೀಪ್ ಎನ್ನುವರಿಗೆ ಸೇರಿದ ನಾಲ್ಕು ಜಾನುವಾರುಗಳಲ್ಲದೆ, ಅವರ ಕೊಟ್ಟಿಗೆಗೆ ಬಂದಿದ್ದ ಬೇರೆ ಎರಡು ಜಾನುವಾರುಗಳು ಕೂಡ ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ.

ಹಾಗೆಯೇ ಪಕ್ಕದ ಹಂತೂರು ಗ್ರಾಮದಲ್ಲಿ ಒಂದು ಜಾನುವಾರು ಮೃತಪಟ್ಟಿದೆ. ಸಂದೀಪ್ ಅವರದು ಉಗ್ಗೇಹಳ್ಳಿ ಗ್ರಾಮದ ಇತರೆ ಮನೆಗಳಿಂದ ಸ್ವಲ್ಪ ದೂರವಿರುವ ಒಂಟಿ ಮನೆ. ಅವರ ದನದ ಕೊಟ್ಟಿಗೆ ಮನೆಯಿಂದ ದೂರದಲ್ಲಿ ತೋಟದ ಸಮೀಪ ಇದ್ದು, ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ದನಗಳು 15 ದಿನಗಳ ಹಿಂದೆ ಕಾಣೆಯಾಗಿದ್ದವು. ನಂತರ ಅವು ಸಮೀಪದ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅದಾಗಿ ಹತ್ತು ದಿನಗಳ ಅವಧಿಯಲ್ಲಿ ಮತ್ತೆ ನಾಲ್ಕು ದನಗಳು ಅದೇ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕಿದ್ದವು. ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನು ಹೊರಗೆ ಅಟ್ಟಿಕೊಂಡು ಹೋಗಿ ಮರವೊಂದಕ್ಕೆ ಕಟ್ಟಿ ಹಾಕಿ ಸಾಯಿಸಿದ ಸ್ಥಿತಿಯಲ್ಲಿ ಜಾನುವಾರುಗಳ ಕಳೇಬರ ಪತ್ತೆಯಾಗಿವೆ.

ಈ ಬಗ್ಗೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿ ಸಾವನ್ನಪ್ಪಿರುವ ಜಾನುವಾರುಗಳು ಹೇಗೆ ಮೃತಪಟ್ಟವು? ಎಂಬುದನ್ನು ಸೂಕ್ತವಾಗಿ ತನಿಖೆ ನಡೆಸಿ ಸತ್ಯವನ್ನು ಪೊಲೀಸರು ಬಯಲಿಗೆಳೆಯಬೇಕಾಗಿದೆ. ಸಾವನ್ನಪ್ಪಿರುವ ಎಲ್ಲಾ ಗೋವುಗಳು ಒಂದೇ ಪ್ರದೇಶದಲ್ಲಿ ಕಂಡು ಬಂದಿವೆ. ಎಲ್ಲಾ ಜಾನುವಾರುಗಳು ಕುತ್ತಿಗೆಯ ಭಾಗದಲ್ಲಿ ಗಾಯಗೊಂಡು ಮೃತಪಟ್ಟಿವೆ. ಇದು ಗುಂಡೇಟಿನ ಕೃತ್ಯವೇ ? ಕಾಡು ಪ್ರಾಣಿಗಳ ದಾಳಿಯಿಂದ ಆಗಿರುವ ಸಾವೇ ? ಒಂದು ವೇಳೆ ಗುಂಡೇಟಿನಿಂದ ಆಗಿದ್ದರೆ ಇಷ್ಟು ಗೋವುಗಳನ್ನು ಕೊಂದವರು ಯಾರು ? ಜಾನುವಾರುಗಳನ್ನು ಕೊಲ್ಲಲು ಕಾರಣವೇನು ? ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆ ನಂತರ ಉತ್ತರ ಸಿಗಲಿದೆ.

ಇದಲ್ಲದೆ ಈ ಭಾಗದಲ್ಲಿ ಇತ್ತೀಚೆಗೆ ಚಿರತೆಯೊಂದು ಸಂಚರಿಸಿ ಸಮೀಪದ ಹಾಲೂರು ಗ್ರಾಮದಲ್ಲಿ ಜಾನುವಾರುಗಳನ್ನು ಸಾಯಿಸಿತ್ತು. ಹಂತೂರು ಗ್ರಾಮದಲ್ಲಿ ಜಾನುವಾರೊಂದರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಈ ವಿಚಾರದಲ್ಲಿ ಸಮಗ್ರವಾದ ತನಿಖೆ ಆಗಬೇಕು. ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡು ಕಷ್ಟದಿಂದ ಬದುಕು ನಡೆಸುತ್ತಿರುವ ಸಂದೀಪ್ ಅವರು ಸಾಕಿದ್ದ ಜಾನುವಾರುಗಳೆಲ್ಲ 10 ದಿನಗಳ ಅವಧಿಯಲ್ಲಿ ಸಾವನ್ನಪ್ಪಿವೆ. ಇದರಿಂದ ಅವರಿಗೆ ತುಂಬಾ ನಷ್ಟವಾಗಿದೆ.

ಈ ರೀತಿ ಜಾನುವಾರುಗಳು ವಿಚಿತ್ರವಾದ ಸನ್ನಿವೇಶದಲ್ಲಿ ಸಾವನ್ನಪ್ಪಿರುವುದು ಗ್ರಾಮದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ವಿಚಾರದ ಕುರಿತಾಗಿ ಸಂಬಂಧಿಸಿದ ಇಲಾಖೆಗಳು ಕೂಲಂಕಷವಾಗಿ ತನಿಖೆ ನಡೆಸಿ ಜಾನುವಾರುಗಳ ಸಾವಿಗೆ ನಿಖರ ಕಾರಣವನ್ನು ಕಂಡು ಹಿಡಿಯಬೇಕಾಗಿದೆ. ಜೊತೆಗೆ ಸರ್ಕಾರ ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಸಸ್ಯಾಹಾರ ಸೇವಿಸಿ, ಹವಾಮಾನ ವೈಪರೀತ್ಯ ತಪ್ಪಿಸಿ: ಜಿ20 ಗಮನ ಸೆಳೆಯಲು ವಿಶಿಷ್ಟ ಅಭಿಯಾನ

For All Latest Updates

ABOUT THE AUTHOR

...view details