ಚಿಕ್ಕಮಗಳೂರು: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಶೃಂಗೇರಿ ಮಠದ ಶ್ರೀಗಳು ಗೈರಾಗಲಿದ್ದಾರೆ. ಶ್ರೀಗಳ ಪರವಾಗಿ ಆಡಳಿತಾಧಿಕಾರಿ ತೆರಳಲಿದ್ದಾರೆ. ಈ ಬಗ್ಗೆ ಮಠ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಪೀಠಗಳು ರಾಮಲಲ್ಲನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಿಂದ ದೂರ ಉಳಿದಿವೆ. ಪೂರ್ಣವಾಗದ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಮೂರು ಮಠಗಳು ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಅಯೋಧ್ಯೆಗೆ ಹೋಗದಿರುವ ನಿರ್ಧಾರವನ್ನು ತಿಳಿಸಿದ್ದರು.
ಇದೀಗ ಶೃಂಗೇರಿ ಮಠ ಕೂಡಾ ಅಂತರ ಕಾಯ್ದುಗೊಂಡಿದೆ. ಕರ್ನಾಟಕದಲ್ಲಿ ನಾಲ್ವರು ರಾಮ ಮಂದಿರ ಟ್ರಸ್ಟ್ನ ಸದಸ್ಯರಿದ್ದಾರೆ. ಇವರಲ್ಲಿ ಓರ್ವರಾಗಿರುವ ಶೃಂಗೇರಿ ಮಠದ ಶ್ರೀಗಳು ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ.
ತಿಂಗಳ ಹಿಂದೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಮಠ ರಾಮ ಮಂದಿರಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಅಪಪ್ರಚಾರ ಮಾಡಿದ್ದರು. ಅದಕ್ಕೆ ಮಠ ಸ್ಪಷ್ಟನೆ ನೀಡಿತ್ತು. ಶ್ರೀಗಳು ಪ್ರತಿಕ್ರಿಯಿಸಿ, ಇಂಥ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ಜನವರಿ 22ಕ್ಕೆ ಎಲ್ಲರೂ ರಾಮತಾರಕ ಜಪ ಪಠಿಸುವಂತೆ ಅವರು ಕರೆ ನೀಡಿದ್ದರು.
ಇದನ್ನೂ ಓದಿ:ಅಯೋಧ್ಯೆಯ ರಾಮನ ಜೊತೆಗೆ ಮಂಡ್ಯದ ರಾಮನಿಗೂ ಅರುಣ್ ಯೋಗಿರಾಜ್ ಶಿಲ್ಪಿ