ಚಿಕ್ಕಮಗಳೂರು:ದಕ್ಷಿಣ ಭಾರತದಲ್ಲೇ ಭಗವದ್ಗೀತೆ ಮುದ್ರಣವಾಗೋ ಏಕೈಕ ಸ್ಥಳ ಎಂದರೆ ಅದು ಅಜ್ಜಂಪುರ ತಾಲೂಕಿನಲ್ಲಿರೋ ಶಿವಾನಂದ ಆಶ್ರಮ. ಲಕ್ಷಾಂತರ ಪುಸ್ತಕಗಳು ಇಲ್ಲಿ ಮುದ್ರಣಗೊಂಡು ದೇಶದ ಮೂಲೆ ಮೂಲೆಗೂ ತಲುಪಿವೆ. ಅಷ್ಟೇ ಅಲ್ಲ, ಈ ಸ್ಥಳ ತನ್ನದೇ ಆದ ವೈಶಿಷ್ಟ್ಯತೆಗಳನ್ನೂ ಹೊಂದಿದೆ. ಹಾಗಾಗಿ ಪ್ರವಾಸಿತಾಣವಾಗಿಯೂ ಹೆಸರು ಮಾಡಿದೆ. ಆದರೆ ಕೆಲ ವರ್ಷದಿಂದ ಇಲ್ಲಿ ಭಗವದ್ಗೀತೆ ಪುಸ್ತಕ ಮುದ್ರಣ ಕಾರ್ಯ ನಿಂತುಹೋಗಿದೆ.
1930ರಲ್ಲಿ ಈ ಆಶ್ರಮ ಆರಂಭವಾಗಿತ್ತು. ಆಶ್ರಮದಲ್ಲಿದ್ದ ಶಂಕರಾನಂದ ಸ್ವಾಮೀಜಿಯ ಪ್ರವಚನ ಕೇಳಲು ದಕ್ಷಿಣ ಭಾರತದ ನಾನಾ ಕಡೆಗಳಿಂದ ಭಕ್ತರು ಅಗಮಿಸುತ್ತಿದ್ದರು. ಉತ್ತರ ಹಾಗೂ ದಕ್ಷಿಣ ಭಾರತದ ಜನ ಇಂದಿಗೂ ಶಿವಾನಂದ ಆಶ್ರಮವನ್ನು ನೆನಪಿಸಿಕೊಳ್ಳೋದೇ ಇಲ್ಲಿನ ಭಗವದ್ಗೀತೆ ಮುದ್ರಣಾಲಯದಿಂದ. ದಕ್ಷಿಣ ಭಾರತದಲ್ಲಿ ಭಗವದ್ಗೀತೆ ಮುದ್ರಣವಾಗುತ್ತಿದ್ದ ಏಕೈಕ ಸ್ಥಳವಿದು ಅನ್ನೋ ಪ್ರಖ್ಯಾತಿಯೂ ಈ ಆಶ್ರಮಕ್ಕಿದೆ. ಆದರೆ ಶಂಕರಾನಂದ ಸ್ವಾಮೀಜಿಯವರ ದೇಹತ್ಯಾಗದ ಬಳಿಕ ಭಗವದ್ಗೀತೆ ಮುದ್ರಣವೂ ನಿಂತುಹೋಗಿದೆ.
ಅಷ್ಟೆ ಅಲ್ಲದೆ, ಸ್ವಾಮೀಜಿಯವರಿಂದ ಗಿಡಮೂಲಿಕೆ ಔಷಧಿ ಪಡೆಯೋಕೆ ರಾಜ್ಯ-ಹೊರರಾಜ್ಯದಿಂದಲೂ ಜನ ಬರುತ್ತಿದ್ದರು. ಹೀಗೆ ಬಂದವರು ಸ್ವಾಮಿಜಿ ಆಶೀರ್ವಾದ ಪಡೆದು, ಔಷಧಿ ಪಡೆಯೋದರ ಜೊತೆ ಇದೇ ಸ್ಥಳದಲ್ಲಿ ಭಗವದ್ಗೀತೆಯನ್ನು ಪಠಿಸುತ್ತಿದ್ದರು. ಭಕ್ತರು ಬಂದಾಗ ಸ್ವಾಮೀಜಿಯವರಿಂದಲೂ ಪ್ರವಚನ ನಡೆಯುತ್ತಿತ್ತು. ಆದರೆ ಅದೆಲ್ಲವೂ ಶ್ರೀಗಳ ಜೊತೆಯೇ ದೇಹತ್ಯಾಗ ಮಾಡಿವೆ. ಈಗ ಇಲ್ಲಿಗೆ ಜನ ಬರೋದು ತೀರಾ ವಿರಳ. ಮುದ್ರಣಾಲಯವೂ ಸ್ಥಗಿತಗೊಂಡಿರುವ ಕಾರಣ ಪ್ರವಾಸಿಗರು ಈ ಕಡೆ ಸುಳಿಯುತ್ತಿಲ್ಲ.