ಚಿಕ್ಕಮಗಳೂರು :ಶೃಂಗೇರಿಯಲ್ಲಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಅನ್ಯ ಕೋಮಿನ ಧ್ವಜ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಎಸ್ಪಿ ಅಕಯ್ ಮಚ್ಚಿಂದ್ರ ಸ್ಪಷ್ಟನೆ ನೀಡಿದ್ದಾರೆ.
ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ತನಿಖೆಗಾಗಿ ಇಲಾಖೆ ತಂಡವನ್ನು ರಚನೆ ಮಾಡಿತ್ತು. ಈ ತಂಡ ಶೃಂಗೇರಿ ನಗರದ ಎಲ್ಲಾ ರಸ್ತೆಯ ಸಿಸಿ ಟಿವಿಗಳನ್ನು ಪರಿಶೀಲಿಸಿದೆ ಮತ್ತು ಕೆಲ ಶಂಕಿತ ವ್ಯಕ್ತಿಗಳನ್ನು ವಿಚಾರಣೆ ಒಳಪಡಿಸಿದೆ. 28 ವರ್ಷದ ಮಿಲಿಂದ ಎಂಬ ವ್ಯಕ್ತಿ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ. ಮದ್ಯದ ಅಮಲಿನಲ್ಲಿ ಕೃತ್ಯ ನಡೆಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಶೃಂಗೇರಿ ನಗರದಲ್ಲಿ ಧಾರಾಕಾರ ಮಳೆ ಹಾಗೂ ಭಾರೀ ಚಳಿ ಇದ್ದ ಕಾರಣ, ಮಳೆಯಿಂದ ರಕ್ಷಿಸಿಕೊಳ್ಳಲು ವಿವಾದಕ್ಕೆ ಕಾರಣವಾದ ಬ್ಯಾನರ್ನ್ನು ತೆಗೆದುಕೊಂಡು ನಂತರ ಅದನ್ನು ದೇವರಿಗೆ ಕೊಡಲು ಯೋಚಿಸಿ, ಬ್ಯಾನರ್ನ್ನು ಶಂಕರಾಚಾರ್ಯರ ಪುತ್ಥಳಿ ಮೇಲೆ ಹಾಕಿರುವುದನ್ನು ಒಪ್ಪಿಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಕಾರಣ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ಕೃತ್ಯ ಎಸಗಿದ ಆರೋಪಿ ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಸೇರಿರುವುದಿಲ್ಲ. ಈ ಘಟನೆ ಪೂರ್ವ ನಿಯೋಜಿತವಾಗಿರಲಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಮಾಡಿರುವುದು ಕಂಡು ಬಂದಿಲ್ಲ. ಮದ್ಯದ ಅಮಲಿನಲ್ಲಿ ಒಂದು ಧರ್ಮವನ್ನು ಪ್ರತಿಬಿಂಬಿಸುವ ಬ್ಯಾನರನ್ನು ಮಸೀದಿಯಿಂದ ತಂದು, ಶಂಕರಾಚಾರ್ಯರ ಪುತ್ಥಳಿಯ ಮೇಲೆ ಹಾಕಿದ್ದಾನೆ. ಬಂಧಿತ ಆರೋಪಿ ವಿರುದ್ಧ ಈ ಹಿಂದೆ ಒಂದು ಬಾರಿ ಕಳ್ಳತನ ನಡೆಸಿರುವ ಆರೋಪವಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣವೂ ದಾಖಲಾಗಿದೆ ಎಂದರು.