ಮಂತ್ರಾಕ್ಷತೆ ಹಂಚಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು :ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆ ಚಿಕ್ಕಮಗಳೂರಿಗೆ ಬಂದಿರುವ ಮಂತ್ರಾಕ್ಷತೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಬಳಿಕ ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಶೋಭಾ ಕರಂದ್ಲಾಜೆ ಹಂಚಿದ್ದಾರೆ.
ನಗರದ ವಿಜಯಪುರ ಬಡಾವಣೆಯಲ್ಲಿರುವ ಪ್ಲೇಗಿನಮ್ಮ ದೇವಸ್ಥಾನದಲ್ಲಿ ಮಂತ್ರಾಕ್ಷತೆ ಇಟ್ಟು ಪೂಜೆ ಮಾಡಲಾಗಿದೆ. ಪೂಜೆ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರೊಂದಿಗೆ ತೆರಳಿ ಶೋಭಾ ಕರಂದ್ಲಾಜೆ ಜೊತೆಗೂಡಿ ಪ್ರತಿ ಹಿಂದೂಗಳ ಮನೆ ಮನೆಗೂ ತೆರಳಿ ಮಂತ್ರಾಕ್ಷತೆಯನ್ನು ವಿತರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಸ್ತೆ ಉದ್ದಕ್ಕೂ ರಾಮ ಜಪ ಮಾಡಿಕೊಂಡು ಹೆಜ್ಜೆ ಹಾಕಿದರು.
ಇದೇ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ನ ಮಾನಸಿಕ ಸ್ಥಿತಿನೇ ಕೋಮುಗಲಭೆ ಎಬ್ಬಿಸುವಂತದ್ದು, ದೇಶ ಶಾಂತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯಾವುದೇ ಕೋಮು ದಳ್ಳುರಿ ನಡೆದಿಲ್ಲ. ನರೇಂದ್ರ ಮೋದಿ ಆಡಲಿತದಿಂದ ಎಲ್ಲ ಭಯೋತ್ಪಾದಕ ಮಾನಸಿಕತೆಯ ಜನಕ್ಕೆ ಭಯ ಹುಟ್ಟಿದೆ. ಅದಕ್ಕಾಗಿ ಮತ್ತೊಂದು ಸಾರಿ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ, ದೇಶದಲ್ಲಿ ಕೋಮು ಗಲಭೆ ಎಬ್ಬಿಸಬೇಕು ಎಂದು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ ಎನ್ನಿಸುತ್ತಿದೆ ಎಂದರು.
ದೇಶದ ಜನ ಹಿಂಸೆಯನ್ನು ಬಯಸುತ್ತಿಲ್ಲ, ಶಾಂತಿಯನ್ನು ಬಯಸುತ್ತಿದ್ದಾರೆ. ರಾಮಮಂದಿರ ನಿರ್ಮಾಣವಾದ ನಂತರ ಈ ರಾಮನಿಗೊಂದು ಅಸ್ಮಿತೆ ಬಂದಿದೆ. ನಮ್ಮ ದೇಶದಲ್ಲಿ ನಮ್ಮ ರಾಮ ಮಂದಿರ ಅಗಿದೆ ಎಂದು ಅನಿಸಿದೆ. ಅದಕ್ಕಾಗಿ ಈ ಮಾತಿಗೆ ಯಾರು ಕಿವಿಕೊಡಬಾರದು. ಎಲ್ಲರೂ ಶಾಂತಿಯನ್ನು ಕಾಪಾಡಿಕೊಂಡು ರಾಮನ ಭಜನೆ ಮಾಡುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕಾಂಗ್ರೆಸ್ ಸರ್ಕಾರದ ರಾಜಕೀಯ ನೀತಿನೇ, ಪಾಪುಲರ್ ಫ್ರಂಟ್ ಅಫ್ ಇಂಡಿಯಾ (ಪಿಎಫ್ಐ) ದಂತಹ ದೇಶದ್ರೋಹಿ ಸಂಘಟನೆಯ ಪ್ರಕರಣಗಳನ್ನು ಕ್ಯಾಬಿನೆಟ್ಗೆ ತಂದು ವಾಪಸ್ ಪಡೆಯುವಂತಹದ್ದು, ಯಾರು ದೇಶ ಭಕ್ತರು ರಾಮ ಮಂದಿರ ಹೋರಾಟ ಮಾಡಿದ್ದಾರೋ, ಅವರ ಮೇಲೆ ಕೇಸ್ಗಳನ್ನು ಮಾಡೋದು. ರಾಜ್ಯದಲ್ಲಿ ವಿಧ್ವಂಸಕ ಕೃತ್ಯವನ್ನು ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಯಾವುದೇ ಕೇಸ್ಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಭಯೋತ್ಪಾದಕರು, ದೇಶದ್ರೋಹಿಗಳನ್ನು ರಕ್ಷಣೆ ಮಾಡುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮಾಡುತ್ತಾ ಬಂದಿದೆ. ಅವತ್ತು 2013, 2017 ರಲ್ಲಿ ಇದ್ದಂತಹ ಸರ್ಕಾರ ಅದೇ ಮಾಡಿದ್ದು, ಪೆಟ್ರೋಲ್ ಬಾಂಬ್ ಕೇಸ್ ಮುಚ್ಚಿ ಹಾಕಿದ್ದರು ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಇದನ್ನೂ ಓದಿ :ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ: ಬಸವರಾಜ ಬೊಮ್ಮಾಯಿ