ಚಿಕ್ಕಮಗಳೂರು/ಶಿವಮೊಗ್ಗ : ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ನದಿ, ಬಾವಿ, ಕೆರೆ-ಕಟ್ಟೆಗಳು ತುಂಬಿದ್ದು, ಜಲಪಾತಗಳು ಭೋರ್ಗರೆಯುತ್ತಿವೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ನಯನ ಮನೋಹರ ದೃಶಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಫಾಲ್ಸ್ನಲ್ಲಿ ನೀರು ಧುಮುಕುವ ರಮಣೀಯ ದೃಶ್ಯ ನಯನ ಮನೋಹರವಾಗಿದೆ. ಭೂತಾಯಿಗೆ 80 ಅಡಿ ಎತ್ತರದಿಂದ ಪ್ರಕೃತಿಯೇ ಹಾಲಿನ ಅಭಿಷೇಕ ಮಾಡಿದಂತೆ ಕಾಣುತ್ತಿದೆ. ಹೆಬ್ಬೆ ಜಲಪಾತದ ಸೌಂದರ್ಯ ಕಂಡು ಪ್ರವಾಸಿಗರು ಮೂಕ ವಿಸ್ಮಿತರಾಗಿದ್ದು, ಈ ಹೆಬ್ಬೆ ಜಲಪಾತದ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಮುಳ್ಳಯ್ಯನಗಿರಿ ಮತ್ತಷ್ಟು ಸುಂದರವಾಗಿ ಗೋಚರಿಸುತ್ತಿದೆ.
ರಮಣೀಯವಾಗಿ ಹುಲಿಕಲ್ ಘಾಟಿಗೆ ಚಾಚಿಕೊಂಡಿದೆ ಬಾಳೆ ಬರೆ ಫಾಲ್ಸ್:ಮಲೆನಾಡಿನಾದ್ಯಂತ ಎಡೆಬಿಡದೇ ಮಳೆ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಜಲಪಾತಗಳೂ ಭರ್ತಿಯಾಗಿವೆ. ಹೊಸನಗರದ ಹಳ್ಳಕೊಳ್ಳಗಳೆಲ್ಲಾ ತುಂಬಿ ನದಿಯಂತೆ ಹರಿಯುತ್ತಿವೆ. ರಿಪ್ಪನ್ ಪೇಟೆಯ ಸಿಡಿಹಳ್ಳದಿಂದ ಹಿಡಿದು ವರಾಹಿ ಹಿನ್ನೀರಿನವರೆಗೆ ಎಲ್ಲೆಲ್ಲೂ ಜಲರಾಶಿ. ಹೊಸನಗರದ ಘಟ್ಟದ ತುಂಬೆಲ್ಲಾ ಮಂಜು ಮುಸುಕಿದ ವಾತಾವರಣ.