ಚಿಕ್ಕಮಗಳೂರು:ಕಾಶ್ಮೀರದ ಗಡಿ ಭಾಗದ ತಿತ್ವಾಲ್ನಲ್ಲಿ ಶಾರದಾದೇವಿ ದೇಗುಲ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದೆ ಸನ್ನಿಧಿಯಿಂದ ವಿಜಯದಶಮಿಯ ದಿನ ಪಂಚಲೋಹ ಮೂರ್ತಿ ಹಸ್ತಾಂತರ ಕಾರ್ಯವು ನಡೆಯಲಿದೆ. ಕಾಶ್ಮೀರದ ಸೇವ್ ಶಾರದಾ ಸಮಿತಿಯವರು ಶೃಂಗೇರಿಗೆ ಬಂದು ಪಂಚಲೋಹ ವಿಗ್ರಹ ಪಡೆಯಲಿದ್ದು, ಅದರ ಸಿದ್ಧತೆಗಳು ಶೃಂಗೇರಿ ಮಠದಲ್ಲಿ ನಡೆಯುತ್ತಿದೆ.
ವಿಜಯದಶಮಿಯ ಶುಭ ದಿನವಾದ ಇಂದು ಪಂಚ ಲೋಹದಿಂದ ನಿರ್ಮಾಣ ಮಾಡಲಾಗಿರುವ ದೇವಿಯ ವಿಗ್ರಹವನ್ನು ಶೃಂಗೇರಿಯಲ್ಲಿ ವಿಶೇಷವಾಗಿ ಪೂಜಿಸಿ ಹಸ್ತಾಂತರ ಮಾಡಲಾಗುತ್ತದೆ. ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕೆತ್ತನೆ ಮಾಡಿರುವ ದೇವಿಯ ವಿಗ್ರಹದ ಹಸ್ತಾಂತರ ಕಾರ್ಯವು ಅತ್ಯಂತ ಅದ್ಧೂರಿಯಾಗಿ ಜರುಗಲಿದೆ.
ಈ ಕುರಿತು ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ ಮಾತನಾಡಿ, ಸಮಿತಿಯ 12 ಮಂದಿ ಶೃಂಗೇರಿಗೆ ಹೋಗಿ ಪಂಚಲೋಹ ಮೂರ್ತಿ ಪಡೆಯುತ್ತೇವೆ. ಕಾಶ್ಮೀರದಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣ ಮುಗಿದಿಲ್ಲ. ಹೀಗಾಗಿ ಸದ್ಯಕ್ಕೆ ಮೂರ್ತಿಯನ್ನು ಶೃಂಗೇರಿ ಅಥವಾ ಬೆಂಗಳೂರಿನಲ್ಲಿ ಇಡುತ್ತೇವೆ ಎಂದು ತಿಳಿಸಿದ್ದಾರೆ.