ಕರ್ನಾಟಕ

karnataka

ETV Bharat / state

ಶೃಂಗೇರಿ ಮಠದಲ್ಲಿ ಶಂಕರಾಚಾರ್ಯರ ಬೃಹತ್​ ಪ್ರತಿಮೆ ಅನಾವರಣ - ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದಲ್ಲಿ ಶಂಕರಾಚಾರ್ಯರ 32 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ.

shankaracharya-statue-unveiled-at-shringeri
ಶೃಂಗೇರಿ ಮಠದಲ್ಲಿ ಬೃಹತ್​ ಶಂಕರಾಚಾರ್ಯರ ಪ್ರತಿಮೆ ಅನಾವರಣ

By ETV Bharat Karnataka Team

Published : Nov 11, 2023, 7:02 AM IST

ಚಿಕ್ಕಮಗಳೂರು : ಶೃಂಗೇರಿ ಶಾರದಾಂಬೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಬೆ ದರ್ಶನ ಪಡೆಯುತ್ತಿದ್ದ ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದಾಗಿದೆ. ಇಲ್ಲಿನ ಎರಡು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಶಂಕರಾಚಾರ್ಯರ ಬೃಹತ್ ಹಾಗೂ ಸುಂದರವಾದ ಮೂರ್ತಿಯನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ಈ ಮೂರ್ತಿಯು 32 ಅಡಿ ಎತ್ತರವಿದ್ದು, 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತೀ ತೀರ್ಥ ಶ್ರೀಗಳ ಸಂಕಲ್ಪವಾಗಿತ್ತು. ಅವರ ಸಂಕಲ್ಪದಂತೆ ಈಗ ಪ್ರತಿಮೆ ಅನಾವರಣಗೊಂಡಿದೆ.

ಶ್ರೀ ಭಾರತೀ ತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲೇ ಶಂಕರಾಚಾರ್ಯರ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ. ಶುಕ್ರವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಭಯ ಜಗದ್ಗುರುಗಳು ಭಾಗವಹಿಸಿ ಶಂಕರರ ಪ್ರತಿಮೆಗೆ ಪೂಜೆ ನೆರವೇರಿಸಿದರು. ಾರುತಿ ಬೆಟ್ಟದಲ್ಲಿ ವಿವಿಧ ಪೂಜೆಗಳನ್ನು ನಡೆಸಲಾಯಿತು. ಮೂರ್ತಿ ಅನಾವರಣ ಹಿನ್ನೆಲೆ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.

ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆ ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಹನುಮಗಿರಿ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಟ್ಟ ಹತ್ತಲು-ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ಶಂಕರಾಚಾರ್ಯರ ಪ್ರತಿಮೆ ಜೊತೆ ಅವರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯರು, ತೋಟಕಾಚಾರ್ಯರು, ಪದ್ಮಪಾದಾಚಾರ್ಯರು, ಹಸ್ತ ಮಲಕಾಚಾರ್ಯರ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ.

ಇದನ್ನೂ ಓದಿ :ಭಾರತ-ಪಾಕ್‌ ಗಡಿ ಸಮೀಪ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

ABOUT THE AUTHOR

...view details