ಚಿಕ್ಕಮಗಳೂರು: ಪರಿಸರವಾದಿ ಡಿ.ವಿ. ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕಂಬಿಹಳ್ಳಿ ಗ್ರಾಮದಲ್ಲಿ ಆಗಸ್ಟ್ 30 ರಂದು ಡಿ.ವಿ. ಗಿರೀಶ್ ಮತ್ತು ತಂಡದ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿತ್ತು. ಗಿರೀಶ್ ಅವರ ಜೊತೆಗೆ ಇದ್ದ ಅವರ ಸ್ನೇಹಿತನ ಮಗಳನ್ನು ಕಿಡಿಗೇಡಿಗಳು ಚುಡಾಯಿಸಿದ್ದರು. ಈ ವೇಳೆ, ಕಿಡಿಗೇಡಿಗಳನ್ನು ಗಿರೀಶ್ ಅವರು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಕಿಡಿಗೇಡಿಗಳು ನಡುರಸ್ತೆಯಲ್ಲೇ ಗಿರೀಶ್ ಮತ್ತು ಅವರ ತಂಡದ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶ್ ಅವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಆಗಿತ್ತು.
ಈ ಕುರಿತು ಮಾತನಾಡಿರುವ ಜಿಲ್ಲಾ ಎಸ್ಪಿ ಅಕ್ಷಯ್, ಗಿರೀಶ್ ಅವರು ಕೆಮ್ಮಣ್ಣಗುಂಡಿಯಿಂದ ಚಿಕ್ಕಮಗಳೂರಿಗೆ ಬರುವ ದಾರಿ ಮಧ್ಯೆ ಶಾಂತವೇರಿ ಬಳಿ ಕೆಲ ಹುಡುಗರು ಅರಣ್ಯದಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಗಿರೀಶ್ ಹಾಗೂ ಅವರ ಸ್ನೇಹಿತರಿಗೆ ಈ ಯುವಕರು ಮಧ್ಯಪಾನ ಮಾಡಿ ಕಿರಿಕಿರಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಇವರನ್ನು ಅಡ್ಡಹಾಕಿ ಇನ್ನೂ ಕೆಲವು ಹುಡುಗರನ್ನು ಕರೆಯಿಸಿ ಇವರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡ ನಾವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ತಂಡಗಳನ್ನು ರಚನೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.