ಚಿಕ್ಕಮಗಳೂರು :ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿಪ್ರಸೂತಿ ವೈದ್ಯರೊಬ್ಬರು ಮಗು ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸರ್ಕಾರಿ ವೈದ್ಯ ಸೇರಿ ಇದರಲ್ಲಿ ಭಾಗಿಯಾದವರ ಮೇಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಿಂದಲೇ ನವಜಾತ ಶಿಶುವಿನ ಮಾರಾಟ.. ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯ ಡಾ. ಬಾಲಕೃಷ್ಣ ಮಾಡಿರೋದು ಹೇಯ ಕೃತ್ಯ. ಮದುವೆಗು ಮುಂಚೆಯೇ ಗರ್ಭ ಧರಿಸಿದ್ದ ಯುವತಿ ಮಾರ್ಚ್ 14, 2020ರಂದು ಹೆರಿಗೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯ ಡಾ. ಬಾಲಕೃಷ್ಣ ಆ ಯುವತಿಗೆ ಹೆರಿಗೆ ಮಾಡಿಸಿ ಆಕೆಯಿಂದ ಮಗು ಬೇರ್ಪಡಿಸಿದ್ದರು.
ಮಗು ಹುಟ್ಟಿದಾಗಲೇ ಈ ವೈದ್ಯ ಶೃಂಗೇರಿ ಮೂಲದವರಿಗೆ ದೊಡ್ಡ ಮೊತ್ತಕ್ಕೆ ಮಾರಿ ಹಸಿ ಬಾಣಂತಿಯನ್ನು ಅದೇ ದಿನ ಬಸ್ ಹತ್ತಿಸಿ ಕಳುಹಿಸಿ ಕೊಟ್ಟಿದ್ದರು. ಇದೀಗ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯ ಬಾಲಕೃಷ್ಣ ಜೊತೆಗೆ ಮಗು ಮಾರಾಟದಲ್ಲಿ ಭಾಗಿಯಾದ ನರ್ಸ್ಗಳಾದ ರೇಷ್ಮಾ, ಶೋಭಾ ಹಾಗೂ ಮಗು ಪಡೆದುಕೊಂಡವರ ಮೇಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 8 ತಿಂಗಳ ಬಳಿಕ ಆರೋಗ್ಯ ಹದಗೆಟ್ಟ ಕಾರಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾದ ಮಗುವಿನ ತಾಯಿ ಮಾನಸಿಕ ಖಿನ್ನತೆಯಿಂದ ಮಗು-ಮಗು ಎಂದು ಕನವರಿಸುತ್ತಿದ್ದಳು. ಆಸ್ಪತ್ರೆ ವೈದ್ಯರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ವೈದ್ಯರು ಶಿವಮೊಗ್ಗದ ಮಕ್ಕಳ ಪಾಲನಾ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲಿಂದ ಚಿಕ್ಕಮಗಳೂರು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಚಾರಣೆ ಕೈಗೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಾರ್ಚ್ 14ರಂದು ಹೆರಿಗೆಯಾದರೂ ಕೇಸ್ ಶೀಟ್‌ನಲ್ಲಿ ಶೂಶ್ರುಕಿಯರು ಹೆರಿಗೆಯ ಮಾಹಿತಿ ಬರೆದಿರಲಿಲ್ಲ. ಮಗುವಿನ ಜನನ ಪ್ರಮಾಣ ಪತ್ರ ಸಿಗುವಂತೆ ಮಾಡಲು ಅದೇ ಕೇಸ್ ಶೀಟ್‌ನಲ್ಲಿ ಮಗು ಪಡೆದು ಮಹಿಳೆಯ ಹೆಸರು ಬರೆದು ಯಾಮಾರಿಸೋ ಪ್ರಯತ್ನ ಮಾಡಿದ್ರು.
ಅಸಲಿಗೆ ಮಗು ಪಡೆದಾಕೆ ಗರ್ಭಿಣಿಯೇ ಆಗಿರಲಿಲ್ಲ. ಅವರ ವಿಳಾಸಕ್ಕೆ ಹೋಗಿ ನೋಡಿದಾಗ ಅವರು ಬೇರೆಲ್ಲಿಂದಲೋ ಮಗು ತಂದು ಸಾಕುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಕುರಿತು ಕೊಪ್ಪ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ವೈದ್ಯ ಬಾಲಕೃಷ್ಣ ಸೇರಿ, ಉಳಿದವರೆಲ್ಲರೂ ಎಸ್ಕೇಪ್ ಆಗಿದ್ದಾರೆ. ಇಂತಹ ಹಲವು ಪ್ರಕರಣ ನಡೆದಿರೋ ಅನುಮಾನವೂ ಮೂಡಿದೆ. ಸೂಕ್ತ ತನಿಖೆ ನಡೆದಲ್ಲಿ ಮತ್ತಷ್ಟು ಪ್ರಕರಣ ಬೆಳಕಿಗೆ ಬಂದರೂ ಅಚ್ಚರಿಯಿಲ್ಲ.