ಕರ್ನಾಟಕ

karnataka

By

Published : Jun 17, 2021, 6:02 AM IST

ETV Bharat / state

ಒಂದು ಕರೆ ಮಾಡಿದರೆ ಸಾಕು, ಹಸಿದವರ ಬಳಿಯೇ ಬರುತ್ತೆ ಊಟ

ಆಸ್ಪತ್ರೆಗೆ ಬಂದ ಜನ ಅಯ್ಯೋ ಹೋಟೆಲ್ ಇಲ್ಲ ಅಂತ ಗೋಗರೆಯ ಬೇಕಿಲ್ಲ, ಆಸ್ಪತ್ರೆ ಮುಂಭಾಗ ಇರುವ ಬ್ಯಾನರ್ ನೋಡಿ ಒಂದು ಫೋನ್ ಮಾಡಿದ್ರೆ ಊಟ ಅವರ ಕೈ ಸೇರುತ್ತೆ.

Sahay team in Chikkamgaluru supplying food
ಕಾಫಿನಾಡಿನ ಜನರ ಹೊಟ್ಟೆ ತುಂಬಿಸುತ್ತಿರುವ ‘ಸಹಾಯ್’ ತಂಡ

ಚಿಕ್ಕಮಗಳೂರು:ಒಂದೆಡೆ ಹೆಮ್ಮಾರಿ ಕೊರೊನಾದಿಂದ ಜನ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಲಾಕ್‍ಡೌನ್‍ನಿಂದ ಹೊತ್ತಿನ ತುತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೆರಡು ತಿಂಗಳ ಜನತಾ ಕರ್ಫ್ಯೂ, ಲಾಕ್‍ಡೌನ್ ವೇಳೆಯಲ್ಲಿ ಜನಸಾಮಾನ್ಯರು ಪಟ್ಟಪಾಡು ಅಷ್ಟಿಷ್ಟಲ್ಲ. ಕೆಲವರು ದುಡಿಮೆಯೇ ಇಲ್ಲದೆ ಹಸಿವಿನಿಂದ ಹೈರಾಣಾದರೆ, ಮತ್ತೆ ಕೆಲವರಿಗೆ ಹೋಟೆಲ್​ಗಳಿಲ್ಲದ ಕಾರಣಕ್ಕೆ ಊಟಕ್ಕಾಗಿ ಪರದಾಡುವಂತಾಯಿತು. ಆದರೆ, ಚಿಕ್ಕಮಗಳೂರು ಜನರ ಹಸಿವು ನೀಗಿಸಲು ಸಹಾಯ್​ ತಂಡ ರೆಡಿಯಾಗಿದೆ.

ಕಾಫಿನಾಡಿನ ಜನರ ಹೊಟ್ಟೆ ತುಂಬಿಸುತ್ತಿರುವ ‘ಸಹಾಯ್’ ತಂಡ

ನೀವು ಚಿಂತೆ ಮಾಡ್ಬೇಡಿ. ಉಪವಾಸವೂ ಇರಬೇಡಿ. ಈ ನಂಬರ್​ಗೆ ಕರೆ ಮಾಡಿ. ನಿಮ್ಮ ಹೊಟ್ಟೆ ನಾವು ತುಂಬಿಸ್ತೀವಿ ಅಂತಿದ್ದಾರೆ ಕಾಫಿನಾಡಿನ ಸಹಾಯ್ ತಂಡದ ಸದಸ್ಯರು.

ಚಿಕ್ಕಮಗಳೂರು ನಗರದ ಸಹಾಯ್ ಎಂಬ ಹೆಸರಿನ ತಂಡ ಜನರ ಹಸಿವನ್ನ ನೀಗಿಸುತ್ತಿದೆ. ಕೊರೊನಾ ಸೋಂಕಿನಿಂದ ಮನೆಯಲ್ಲೇ ಲಾಕ್ ಆಗಿದ್ದವರು ಒಂದು ಕರೆ ಮಾಡಿದರೆ ಸಾಕು, ಬಾಗಿಲಿಗೆ ಊಟ ಬರುತ್ತೆ. ದುಡಿಮೆಯೇ ಇಲ್ದೆ ಊಟಕ್ಕೆ ಪರದಾಡ್ತಿದ್ರೂ ಚಿಂತೆ ಬೇಡ, ಆಗಲೂ ಸಹಾಯ್​ ತಂಡ ಫ್ರೀಯಾಗಿ ಆಹಾರ ನೀಡುತ್ತೆ.

ಯಾರೂ ಕೂಡ ಹಸಿವಿನಿಂದ ಸಂಕಟ ಅನುಭವಿಸಬಾರದು ಅನ್ನೋದು ಈ ಸಹಾಯ್ ತಂಡದ ಗುರಿಯಾಗಿದೆ. ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಶುಚಿ - ರುಚಿಯಾದ ಅಡುಗೆ ತಯಾರಿಸಿ ನಗರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಗೂ ಊಟ ಪಾರ್ಸೆಲ್​ ನೀಡುತ್ತಿದ್ದಾರೆ.

ತಂಡದ ಸದಸ್ಯರು ಕರೆ ಮಾಡಿದ ಸ್ಥಳಕ್ಕೆ ಹೋಗಿ ಊಟವನ್ನ ಕೊಟ್ಟು ಬರುತ್ತಿದ್ದಾರೆ. ಬೆಳಗ್ಗೆ ತಿಂಡಿ ಬೇಕು ಅಂದ್ರೆ ರಾತ್ರಿಯೇ ಕರೆ ಮಾಡಿ ಹೇಳಬೇಕು. ಮಧ್ಯಾಹ್ನದ ಊಟಕ್ಕೆ ಬೆಳಗ್ಗೆ 10 ಗಂಟೆಯೊಳಗೆ ಕರೆ ಮಾಡಿ ತಿಳಿಸಬೇಕು. ರಾತ್ರಿಗೂ ಅಗತ್ಯವಿದ್ರೆ ಮೊದಲೇ ಹೇಳಿದ್ರೆ ಊಟವನ್ನ ರೆಡಿ ಮಾಡಿ ಕೊಡುತ್ತೆ ಈ ಸಹಾಯ್ ತಂಡ.

ಯಾವ-ಯಾವ ಸ್ಥಳಗಳಿಗೆ ಎಷ್ಟೆಷ್ಟು ಊಟ ಬೇಕು ಅಂತಾ ಪಟ್ಟಿ ಮಾಡಿ, ಒಂದೊಂದು ಮಾರ್ಗದ ಕಡೆ ಒಂದಷ್ಟು ಸದಸ್ಯರು ಹೋಗಿ ಊಟ ನೀಡುತ್ತಾರೆ. ಲಾಕ್​​ಡೌನ್​ ಸಮಯದಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಈ ಸಹಾಯ್​ ತಂಡದ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ABOUT THE AUTHOR

...view details