ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಕುಖ್ಯಾತ ರೌಡಿಶೀಟರ್ ಒಬ್ಬ ಪರಾರಿ ಆದ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿಯ ಮಾಗಲು ಗ್ರಾಮದ ನಿವಾಸಿ ಪೂರ್ಣೇಶ್ ಪೊಲೀಸರ ಕಣ್ತಪ್ಪಿಸಿ ಮಲ್ಲೇಗೌಡ ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿರುವ ರೌಡಿಶೀಟರ್. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಪೊಲೀಸರಿಗೆ ಬೇಕಾಗಿದ್ದ. ಕೆಲವು ದಿನಗಳ ಹಿಂದೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪೊಲೀಸರು ಪೂರ್ಣೇಶ್ನನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆಯೇ ಮಚ್ಚು ಬಿಸಿ ಹಲ್ಲೆಗೆ ಯತ್ನಿಸಿದ್ದ. ಆ ವೇಳೆ, ಬಾಳೆಹೊನ್ನೂರಿನ ಠಾಣಾಧಿಕಾರಿ ಪೂರ್ಣೇಶ್ ಕಾಲಿಗೆ ಗುಂಡು ಹಾರಿಸಿ ಬಂದಿಸಿದ್ದರು.
ಗುಂಟೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಪೂರ್ಣೇಶ್ ಇತ್ತೀಚೆಗೆ ಕೊಂಚ ಚೇತರಿಸಿಕೊಂಡಿದ್ದ. ಪೊಲೀಸರ ಭದ್ರತೆಯಲ್ಲೇ ಆಸ್ಪತ್ರೆಯಲ್ಲಿದ್ದ ಪೂರ್ಣೇಶ್ ಈಗ ಪರಾರಿಯಾಗಿದ್ದಾನೆ. ಪೂರ್ಣೇಶ್ ವಿರುದ್ಧ 4 ಹಾಫ್ ಮರ್ಡರ್ ಕೇಸ್, 3 ಹಲ್ಲೆ ಪ್ರಕರಣ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರ ಸಂಬಂಧ ಈತನ ವಿರುದ್ಧ ವಾರಂಟ್ ಕೂಡ ಜಾರಿಯಾಗಿದೆ.
ಕ್ರಿಕೆಟ್ ಆಡಲು ಬಂದಿದ್ದ ಪಶುವೈದ್ಯ ಹೃದಯಘಾತದಿಂದ ಸಾವು: ಮತ್ತೊಂದೆಡೆ, ಕ್ರಿಕೆಟ್ ಆಡಲು ಬಂದಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ಪಶು ವೈದ್ಯ ಹೃದಯಾಘಾತದಿಂದ ಕ್ರೀಡಾಂಗಣದಲ್ಲಿ ಕುಸಿದು ಬಿದ್ದು ಮೃತ ಪಟ್ಟಿರುವ ಘಟನೆ ಶುಕ್ರವಾರ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಚಿಕ್ಕಮಗಳೂರು ನಗರದ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಪಶು ವೈದ್ಯ ಶಿವಪ್ಪ ಬಾದಾಮಿ ಎಂಬುವರು ಮೊದಲು ಒಂದು ಕ್ರಿಕೆಟ್ ಮ್ಯಾಚ್ ಆಡಿ ನಂತರ ಫೋಟೋ ಸೇಷನ್ನಲ್ಲಿ ಪಾಲ್ಗೊಂಡಿದ್ದರು. ನಂತರ ಅಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರಿಗೆ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ಮೃತ ಪಟ್ಟಿದ್ದರು. ಅವರ ಮೃತ ದೇಹವನ್ನು ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿತ್ತು.
ಮೈಸೂರು ವಿಭಾಗ ಮಟ್ಟದ ಪಶು ವೈದ್ಯರ ಕ್ರೀಡಾಕೂಟಕ್ಕೆ ಏಳು ಜಿಲ್ಲೆಗಳ 12 ತಂಡಗಳು ಆಗಮಿಸಿದ್ದವು. ಚಿಕ್ಕಮಗಳೂರು ಪಶುವೈದ್ಯ ಸಂಘ ಆಯೋಜಿಸಿದ್ದ ಎರಡು ದಿನಗಳ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡಗು ತಂಡದಿಂದ ಶಿವಪ್ಪ ಬಾದಾಮಿ ಕ್ರಿಕೆಟ್ ಆಡಲು ಶುಕ್ರವಾರ ನಗರಕ್ಕೆ ಆಗಮಿಸಿದ್ದರು.
ಇದನ್ನೂ ಓದಿ:ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆ ಮಾಡಿದ ಪತ್ನಿ, ಆರೋಪಿಗಳ ಬಂಧನ