ಚಿಕ್ಕಮಗಳೂರು:ಜಿಲ್ಲೆಯ ಕಳಸ ತಾಲೂಕಿನ ನಕ್ಸಲ್‌ಪೀಡಿತ ಪ್ರದೇಶಗಳಾದ ಮಾವಿನಹೊಲ ಹಾಗೂ ಮಣ್ಣಿನಪಾಲ್ ಗ್ರಾಮಕ್ಕೆ ಹೋಗುವ ಮಾರ್ಗ ಕಾಮಗಾರಿ ಪೂರ್ಣವಾದರೂ ಜನ ಬಳಕೆಗೆ ಸಿಗುತ್ತಿಲ್ಲ. ಇಲ್ಲಿನ ಬಿಜೆಪಿ ಸದಸ್ಯರು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಂದು ಉದ್ಘಾಟನೆ ಮಾಡುವವರೆಗೂ ಓಡಾಡುವಂತಿಲ್ಲ ಎಂದು ರಸ್ತೆಗೆ ಬೇಲಿ ಹಾಕಿ, ಬಂಡೆ ಕಲ್ಲಿಟ್ಟು ಪೊಲೀಸ್ ಇಲಾಖೆಯ ಬ್ಯಾರಿಕೇಡ್ ನಿಲ್ಲಿಸಿದ್ದಾರೆ!.
ಜನಸಾಮಾನ್ಯರು ರಸ್ತೆಬದಿ ನಡೆದಾಡಬಹುದು ಅಷ್ಟೇ. ಬೈಕ್ ಕೂಡ ಓಡಾಡುವಂತಿಲ್ಲ. ಸರ್ಕಾರದ ದುಡ್ಡಲ್ಲಿ ನಿರ್ಮಿಸಿದ ರಸ್ತೆಯಲ್ಲಿ ರಾಜಕಾರಣಿಗಳ ದೌರ್ಜನ್ಯದ ವಿರುದ್ಧ ಕಳಸ ಜನರು ಅಸಮಾಧಾನ ಹೊರಹಾಕಿದ್ದಾರೆ. ಆದಿವಾಸಿಗಳೇ ಹೆಚ್ಚಿರುವ ಇಲ್ಲಿಗೆ 2018ರಲ್ಲಿ ಹೆಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವರಾದ ಸಂದರ್ಭದಲ್ಲಿ 3 ಕೋಟಿ 20 ಲಕ್ಷ ರೂ ವೆಚ್ಚದಲ್ಲಿ 4 ಕಿ.ಮೀ. ಕಾಂಕ್ರೀಟ್ ರಸ್ತೆ ಮಂಜೂರಾಗಿ ಈಗ ಕಾಮಗಾರಿ ಮುಗಿದು ತಿಂಗಳಾಗಿದೆ.